ಚೆನ್ನೈ: ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಇದೀಗ ಒಂದರ ಮೇಲೊಂದು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಸಿನಿಮಾದ ಬಿಡುಗಡೆಯೇ ಅನಿಶ್ಚತತೆಗೆ ಒಳಗಾಗಿದೆ. ಜನವರಿ 09ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಮಾಣ ಪತ್ರ ನೀಡಲು ಹಿಂಜರಿದ ಹಿನ್ನೆಲೆಯಲ್ಲಿ ಚಿತ್ರತಂಡ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು.
ಜನವರಿ 06 ಮತ್ತು 07ರಂದು ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಜನವರಿ 09ರಂದು ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ, ಮದ್ರಾಸ್ ಹೈಕೋರ್ಟ್‌ನ ಮತ್ತೊಂದು ಪೀಠ ಈ ಆದೇಶಕ್ಕೆ ತಡೆ ನೀಡಿದ್ದು, ಪರಿಣಾಮವಾಗಿ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ: ಹುಬ್ಬಳ್ಳಿಗೆ CID ತಂಡ: ವಿವಸ್ತ್ರ–ಹಲ್ಲೆ ಪ್ರಕರಣದ ತನಿಖೆ ಚುರುಕು
ಈ ಬೆಳವಣಿಗೆಗಳ ನಡುವೆಯೇ, ‘ಜನ ನಾಯಗನ್’ ಸಿನಿಮಾದ ನಿರ್ಮಾಪಕ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಮಾಲೀಕರಾದ ವೆಂಕಟ್ ಕೆ. ನಾರಾಯಣ್ ಅವರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿ, ಸಿನಿಮಾ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ.
ವೆಂಕಟ್ ನಾರಾಯಣ್ ಅವರ ಹೇಳಿಕೆಯಂತೆ, ‘ಜನ ನಾಯಗನ್’ ಸಿನಿಮಾವನ್ನು ಡಿಸೆಂಬರ್ 18, 2025ರಂದು ಸಿಬಿಎಫ್‌ಸಿಗೆ ಸಲ್ಲಿಸಲಾಗಿತ್ತು. ಡಿಸೆಂಬರ್ 22ರಂದು ಸಿಬಿಎಫ್‌ಸಿ ಇಮೇಲ್ ಮೂಲಕ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದು, ಕೆಲವೊಂದು ಕಟ್‌ಗಳನ್ನು ಸಹ ಸೂಚಿಸಿತ್ತು. ಮಂಡಳಿ ಸೂಚಿಸಿದ ಬದಲಾವಣೆಗಳನ್ನು ಮಾಡಿಸಿ, ಅದೇ ದಿನ ಸಿನಿಮಾವನ್ನು ಮರುಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: VB-G RAM G: ಕೃಷಿ ಕಾಯ್ದೆಗಳಂತೆ ಇದೂ ವಾಪಸ್ ಆಗಲಿದೆ
ಆದರೆ ನಂತರ, ಸಿಬಿಎಫ್‌ಸಿಗೆ ಬಂದ ಒಂದು ದೂರಿನ ಆಧಾರದ ಮೇಲೆ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳುಹಿಸಲು ನಿರ್ಧರಿಸಲಾಯಿತು. ದೂರುದಾರರು ಯಾರು ಎಂಬ ಮಾಹಿತಿ ಇಲ್ಲದಿರುವುದು ಮತ್ತು ಬಿಡುಗಡೆ ದಿನಾಂಕ ಸಮೀಪದಲ್ಲಿದ್ದ ಕಾರಣದಿಂದ, ಚಿತ್ರತಂಡ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತು ಎಂದು ವೆಂಕಟ್ ವಿವರಿಸಿದ್ದಾರೆ.
“ನ್ಯಾಯಾಲಯವು ಜನವರಿ 09ರಂದು ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಆದೇಶ ನೀಡಿತ್ತು. ಆದರೆ ಅದೇ ದಿನ ಸಿಬಿಎಫ್‌ಸಿ ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲೇ ಮೇಲ್ಮನವಿ ಸಲ್ಲಿಸಿತು. ಪರಿಣಾಮವಾಗಿ ಆದೇಶಕ್ಕೆ ತಡೆ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಲಾಗಿದೆ. ನಮಗೆ ನ್ಯಾಯ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ಆದಷ್ಟು ಬೇಗ ಸಿನಿಮಾವನ್ನು ಜನರ ಮುಂದೆ ತರಲು ಪ್ರಯತ್ನಿಸುತ್ತಿದ್ದೇವೆ” ಎಂದು ವೆಂಕಟ್ ಹೇಳಿದ್ದಾರೆ.
ಇದನ್ನೂ ಓದಿ: ಕರಾವಳಿ ಕರ್ನಾಟಕ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ: ಕೇರಳ–ಗೋವಾ ಮಾದರಿಯಲ್ಲಿ ಅಭಿವೃದ್ಧಿ – ಡಿ.ಕೆ.ಶಿವಕುಮಾರ್
ದಳಪತಿ ವಿಜಯ್ ಅವರ ಸಿನಿ ಜೀವನದ ಕೊನೆಯ ಸಿನಿಮಾಗೆ ಸಂಬಂಧಿಸಿದಂತೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ವೆಂಕಟ್, “ವಿಜಯ್ ಅವರು ದಶಕಗಳ ಕಾಲ ಚಿತ್ರರಂಗಕ್ಕೆ ನೀಡಿದ ಸೇವೆಗೆ ಇದು ಭವ್ಯ ವಿದಾಯವಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅಡ್ಡಿಗಳು ಎದುರಾಗಿವೆ. ಇದು ನಮ್ಮ ಪಾಲಿಗೆ ಅತ್ಯಂತ ಕಠಿಣ ಮತ್ತು ಭಾವುಕ ಸಮಯ. ಈ ಸಂದರ್ಭದಲ್ಲಿ ಪ್ರೇಕ್ಷಕರು, ವಿತರಕರು, ಪ್ರದರ್ಶಕರು ಮತ್ತು ನಮ್ಮ ಸಹ ಬಂಡವಾಳದಾರರು ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ.
‘ಜನ ನಾಯಗನ್’ ಬಿಡುಗಡೆ ದಿನಾಂಕ ಯಾವಾಗ ನಿಶ್ಚಯವಾಗಲಿದೆ ಎಂಬುದು ಇದೀಗ ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬಿತವಾಗಿದ್ದು, ದಳಪತಿ ವಿಜಯ್ ಅಭಿಮಾನಿಗಳು ಆತಂಕದೊಂದಿಗೆ ಕಾದು ನೋಡುವ ಸ್ಥಿತಿಯಲ್ಲಿದ್ದಾರೆ.









