Home Advertisement
Home ಸಿನಿ ಮಿಲ್ಸ್ ಉತ್ತರಕರ್ನಾಟಕದ ಮೊದಲ WebSeries – OTTಯಲ್ಲಿ ಹೊಸ ಮಿಂಚು

ಉತ್ತರಕರ್ನಾಟಕದ ಮೊದಲ WebSeries – OTTಯಲ್ಲಿ ಹೊಸ ಮಿಂಚು

0
56

ಪರಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ವೆಬ್ ಸೀರಿಸ್‌ಗಳ ಸಂಖ್ಯೆ ಇನ್ನೂ ಕಡಿಮೆಯಾಗಿದೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಜೀ5 ಸಂಸ್ಥೆ ನಿರಂತರವಾಗಿ ಕನ್ನಡ ಒರಿಜಿನಲ್ ವೆಬ್ ಸರಣಿಗಳನ್ನು ಬಿಡುಗಡೆ ಮಾಡುತ್ತಿದ್ದು, ‘ಅಯ್ಯನ ಮನೆ’ ಹಾಗೂ ‘ಮಾರಿಗಲ್ಲು’ ಬಳಿಕ ಇದೀಗ ಹೊಸ ಸರಣಿಯಾಗಿ ಉತ್ತರ ಕರ್ನಾಟಕದ ಮೊಟ್ಟಮೊದಲ ವೆಬ್ ಸೀರಿಸ್ ‘ರಾಕ್ಷಸ’ ಅನ್ನು ಘೋಷಿಸಿದೆ.

ಕ್ರೈಂ ಸೈಕಾಲಜಿಕಲ್ ಕಥಾಹಂದರ ಹೊಂದಿರುವ ಈ ಸರಣಿಯ ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೇ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಅಪರಾಧ ಕಥೆಯ ಸುತ್ತ ಸಾಗುವ ಈ ಸರಣಿ ರೋಚಕ ತಿರುವುಗಳು ಹಾಗೂ ಮನೋವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಚಿತ್ರ ನಿರ್ದೇಶಕ ಆರ್. ಚಂದ್ರುಗೆ ಗೌರವ ಡಾಕ್ಟರೇಟ್

ಕನ್ನಡ ಚಿತ್ರರಂಗದ ಜನಪ್ರಿಯ ನಟ ವಿಜಯ್ ರಾಘವೇಂದ್ರ ಈ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳ ಮೂಲಕ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡಿರುವ ಅವರು, ಕಿರುತೆರೆಯಲ್ಲೂ ಸಕ್ರಿಯರಾಗಿದ್ದು ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಮೊದಲ ಬಾರಿಗೆ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟಿರುವುದು ಅವರ ಅಭಿಮಾನಿಗಳಿಗೆ ವಿಶೇಷ ಸಂತಸ ತಂದಿದೆ.

ಈ ಕುರಿತು ಮಾತನಾಡಿದ ವಿಜಯ್ ರಾಘವೇಂದ್ರ, “ಒಟಿಟಿ ಜಗತ್ತಿಗೆ ಇದು ನನ್ನ ಮೊದಲ ಹೆಜ್ಜೆ. ಈ ಪ್ರಯಾಣ ಆರಂಭಿಸಲು ಇದು ಸೂಕ್ತ ಕಥೆ. ಕನ್ನಡಕ್ಕೆ ವೆಬ್ ಸರಣಿಗಳನ್ನು ತರುವ ಪ್ರಯತ್ನ ಮಾಡುತ್ತಿರುವ ಜೀ5ಗೆ ನಾನು ಧನ್ಯವಾದ ಹೇಳುತ್ತೇನೆ,” ಎಂದು ಹೇಳಿದ್ದಾರೆ. ಈ ಸರಣಿಯಲ್ಲಿ ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಹಾಗೂ ಅಭಿಜಿತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪಾತ್ರಗಳಿಗೆ ಜೀವ ತುಂಬುವ ನಟನೆ ಈ ಸರಣಿಯ ಮತ್ತೊಂದು ವಿಶೇಷವಾಗಿದೆ.

ಇದನ್ನೂ ಓದಿ: ʼರಕ್ಕಸಪುರದೋಳ್ʼ: ರಕ್ಕಸನ ಜಾಡು ಹಿಡಿದು…

‘ರಾಕ್ಷಸ’ ಸರಣಿಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಅವರು ಕಥೆ ಬರೆದಿದ್ದು, ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ತರುಣ್ ಸುಧೀರ್ ತಮ್ಮದೇ ‘ತರುಣ್ ಸುಧೀರ್ ಪ್ರೊಡಕ್ಷನ್ಸ್’ ಮೂಲಕ ಈ ಸರಣಿಯನ್ನು ನಿರ್ಮಿಸಿದ್ದಾರೆ. ಒಟ್ಟು ಏಳು ಎಪಿಸೋಡ್‌ಗಳನ್ನು ಹೊಂದಿರುವ ಈ ವೆಬ್ ಸರಣಿ ಫೆಬ್ರವರಿ 20ರಿಂದ ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಪರಾಧ, ಮಾನಸಿಕ ಸಂಘರ್ಷ, ತನಿಖೆ ಹಾಗೂ ರಹಸ್ಯಗಳ ಸುತ್ತ ಸಾಗುವ ಕಥೆ ಪ್ರೇಕ್ಷಕರನ್ನು ಹಿಡಿದಿಡುವ ನಿರೀಕ್ಷೆ ಇದೆ.

ಈ ಹಿಂದೆ ಬಿಡುಗಡೆಯಾದ ‘ಅಯ್ಯನ ಮನೆ’ ಮತ್ತು ‘ಮಾರಿಗಲ್ಲು’ ಸರಣಿಗಳು ಉತ್ತಮ ಪ್ರತಿಕ್ರಿಯೆ ಪಡೆದಿದ್ದವು. ಅದೇ ರೀತಿಯಲ್ಲಿ ‘ರಾಕ್ಷಸ’ ಸರಣಿಯೂ ಕನ್ನಡ ಓಟಿಟಿ ಪ್ರೇಕ್ಷಕರಲ್ಲಿ ಹೊಸ ಸಂಚಲನ ಸೃಷ್ಟಿಸಬಹುದೇ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.

Previous articleಅಭಿಮಾನಿಗಳು ಏನ್ ಆಸೆ ಪಡ್ತಾರೋ ಅದರಲ್ಲಿ ತಪ್ಪಿಲ್ಲ: ಪಕ್ಷದ ತೀರ್ಮಾನವೇ ಅಂತಿಮ
Next articleರೈಲ್ವೆ ಇಲಾಖೆಯಲ್ಲಿ ಕನ್ನಡ ಭಾಷಿಕರಿಗೆ ಸೂಕ್ತ ಸ್ಥಾನಮಾನದ ಭರವಸೆ