ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಎರಡನೇ ಮದುವೆಯ ಸುದ್ದಿ ಈಗ ಎಲ್ಲೆಡೆ ಸಂಚಲನ ಮೂಡಿಸಿದೆ. ಈ ಹಿಂದೆ ನೃತ್ಯ ಸಂಯೋಜಕಿ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದ ರಘು, 2019ರಲ್ಲಿ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದಿದ್ದರು. ಸುಮಾರು ಆರು ವರ್ಷಗಳ ಬಳಿಕ ಈಗ ಮತ್ತೆ ಹೊಸ ಜೀವನವನ್ನು ಆರಂಭಿಸಲು ನಿರ್ಧರಿಸಿದ್ದಾರೆ.
ರಘು ದೀಕ್ಷಿತ್ ಅವರು ಗ್ರ್ಯಾಮಿ-ನಾಮನಿರ್ದೇಶಿತ ಖ್ಯಾತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ಇವರ ಮದುವೆ ಸಮಾರಂಭ ನಡೆಯಲಿದೆ ಎಂದು ತಿಳಿದುಬಂದಿದೆ. ರಘು ಮತ್ತು ವಾರಿಜಶ್ರೀ ಹಲವು ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದು, ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಹಾಡಿದ್ದಾರೆ. ಅವರ ಸ್ನೇಹ ಈಗ ಪ್ರೀತಿಯಾಗಿ ಅರಳಿದೆ.
ವಾರಿಜಶ್ರೀ ವೇಣುಗೋಪಾಲ್ ಬಗ್ಗೆ ಹೇಳುವುದಾದರೆ, ಅವರು ಪ್ರತಿಭಾವಂತ ಗಾಯಕಿ ಮಾತ್ರವಲ್ಲದೆ, ಅದ್ಭುತ ಕೊಳಲು ವಾದಕಿಯೂ ಹೌದು. ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ವಾರಿಜಶ್ರೀ, ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. “ಎ ರಾಕ್ ಸಮ್‌ವೇರ್” ಎಂಬ ಕೃತಿಗಾಗಿ ಗ್ರ್ಯಾಮಿ ನಾಮನಿರ್ದೇಶನವನ್ನೂ ಪಡೆದಿದ್ದಾರೆ.
ಕರ್ನಾಟಕ ಸಂಗೀತ ಮತ್ತು ಜಾಝ್ ಶೈಲಿಗಳನ್ನು ಬೆರೆಸಿ “ಕರ್ನಾಟಿಕ್ ಸ್ಕ್ಯಾಟ್ ಸಿಂಗಿಂಗ್” ಎಂಬ ಹೊಸ ಕಲಾ ಪ್ರಕಾರವನ್ನು ಸೃಷ್ಟಿಸಿದ ಕೀರ್ತಿ ಇವರಿಗಿದೆ. ಕನ್ನಡದ “ಪ್ರಿಯೆ”, “ಕಡಲ ತೀರದ ಭಾರ್ಗವ”, “ಟಗರು”, “ಆಚಾರ್ ಮತ್ತು ಕಂಪನಿ” ಸೇರಿದಂತೆ ಕನ್ನಡ, ತಮಿಳು, ತೆಲುಗು ಚಿತ್ರರಂಗದ ಹಲವು ಸಿನಿಮಾಗಳಲ್ಲಿ ವಾರಿಜಶ್ರೀ ಹಾಡಿದ್ದಾರೆ.
ತಮ್ಮ ಎರಡನೇ ಮದುವೆಯ ಬಗ್ಗೆ ರಘು ದೀಕ್ಷಿತ್ ಮಾತನಾಡಿ, “ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಇದೆಲ್ಲವೂ ಆಕಸ್ಮಿಕವಾಗಿ ನಡೆಯಿತು. ನನ್ನ ಜೀವನವನ್ನು ಒಂಟಿಯಾಗಿ ಕಳೆಯಲು ಸಿದ್ಧನಾಗಿದ್ದೆ. ಆದರೆ, ಜೀವನ ಬೇರೆ ಯೋಜನೆಗಳನ್ನು ಹೊಂದಿತ್ತು. ಬಲವಾದ ಸ್ನೇಹದಿಂದ ಆರಂಭವಾದ ನಮ್ಮ ಸಂಬಂಧ ಈಗ ಪ್ರೀತಿ ಮತ್ತು ಒಡನಾಟವಾಗಿ ಬೆಳೆದಿದೆ. ವಾರಿಜಶ್ರೀ ಪೋಷಕರ ಆಶೀರ್ವಾದದೊಂದಿಗೆ ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಶುರು ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.
ರಘು ದೀಕ್ಷಿತ್ ಮೇಲೆ ಹಿಂದೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಾಗ, ವೈಯಕ್ತಿಕ ಜೀವನದಲ್ಲಿ ಹಲವು ಏರಿಳಿತಗಳಾಗಿದ್ದವು. ಆಗ ಮಯೂರಿ ಉಪಾಧ್ಯ ಅವರೊಂದಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು. ಆ ಎಲ್ಲ ಕಷ್ಟದ ದಿನಗಳನ್ನು ದಾಟಿ, ಈಗ ರಘು ಹೊಸ ಜೀವನಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಬೆಂಗಳೂರಿನವರಾದ ವಾರಿಜಶ್ರೀ ವೇಣುಗೋಪಾಲ್ ತಮ್ಮದೇ ಆದ ಸಂಗೀತ ಶೈಲಿಯಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ.