Home Advertisement
Home ಸಿನಿ ಮಿಲ್ಸ್ ವರನಟನ ಭಕ್ತಿಗೀತೆಗೆ ಪ್ರಧಾನಿ ಮೋದಿ ಫಿದಾ: ರಾಜಕುಮಾರ್‌ ಹಾಡು ಹಂಚಿಕೊಂಡ ನಮೋ!

ವರನಟನ ಭಕ್ತಿಗೀತೆಗೆ ಪ್ರಧಾನಿ ಮೋದಿ ಫಿದಾ: ರಾಜಕುಮಾರ್‌ ಹಾಡು ಹಂಚಿಕೊಂಡ ನಮೋ!

0
22

ನವದೆಹಲಿ: ಕನ್ನಡದ ಅಸ್ಮಿತೆ, ವರನಟ ಡಾ. ರಾಜ್‌ಕುಮಾರ್ ಜನಪ್ರಿಯತೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಅದು ಜಾಗತಿಕ ಮಟ್ಟದಲ್ಲಿದೆ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ರಾಜಕುಮಾರ್ ಅಭಿನಯದ ಸಿನಿಮಾ ಭಕ್ತಿಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

ಜನರ ಮನ ಮನೆಗಳಲ್ಲಿ ಅಂದೇ ಮನೆ ಮಾತಾಗಿದ್ದ, 1970ರಲ್ಲಿ ತೆರೆಕಂಡ ಇತಿಹಾಸ ಸೃಷ್ಟಿಸಿದ್ದ ‘ಶ್ರೀ ಕೃಷ್ಣದೇವರಾಯ’ ಚಿತ್ರದ ಅತ್ಯಂತ ಜನಪ್ರಿಯ ‘ಶ್ರೀ ಚಾಮುಂಡೇಶ್ವರಿ’ ಹಾಡಿನ ಯೂಟ್ಯೂಬ್ ಲಿಂಕ್‌ನ್ನು ಪ್ರಧಾನಿ ಮೋದಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಸುರ್ವಣ ಯುಗದ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಾರೆ.

ಮೋದಿ ಹಂಚಿಕೊಂಡಿದ್ದಕ್ಕೆ ಕಾರಣವೇನು?: ದೈವ ಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಹೊಂದಿರುವ ಪ್ರಧಾನಿ ಮೋದಿ, ತಾಯಿ ಚಾಮುಂಡೇಶ್ವರಿಯ ಮೇಲಿನ ಭಕ್ತಿಯನ್ನು ಸಾರುವ ಉದ್ದೇಶದಿಂದ ಈ ವಿಡಿಯೋ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋ ಹಂಚಿಕೊಳ್ಳುತ್ತಾ ಹೀಗೆ ಬರೆದುಕೊಂಡಿದ್ದಾರೆ.

“ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ.” ಎಂದು, ಮಾತೆ ಚಾಮುಂಡೇಶ್ವರಿಯ ಆಶೀರ್ವಾದದ ಶಕ್ತಿಯನ್ನು ಪ್ರಧಾನಿಯವರು ಕೊಂಡಾಡಿದ್ದಾರೆ. ದೈವಿಕ ಶಕ್ತಿಯು ಮನುಷ್ಯನಲ್ಲಿ ಹೇಗೆ ಚೈತನ್ಯ ತುಂಬುತ್ತದೆ ಎಂಬುದನ್ನು ಈ ಹಾಡಿನ ಮೂಲಕ ಜಗತ್ತಿಗೆ ಫೋಸ್ಟ್‌ ಮಾಡುವ ಮೂಲಕ ಸಾರಿದ್ದಾರೆ.

ಸಿನಿಮಾದ ಹಿನ್ನೆಲೆ ಮತ್ತು ತಾಂತ್ರಿಕ ತಂಡ: ‘ಶ್ರೀ ಕೃಷ್ಣದೇವರಾಯ’ ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು. ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯನ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು. ‘ಶ್ರೀ ಚಾಮುಂಡೇಶ್ವರಿ’ ಹಾಡಿಗೆ ಖ್ಯಾತ ಗಾಯಕರಾದ ಪಿ. ಲೀಲಾ ಮತ್ತು ಎಸ್. ಗೋವಿಂದರಾಜು ಹಿನ್ನಲೆ ಧ್ವನಿ ನೀಡಿದ್ದಾರೆ. ಟಿ.ಜಿ. ಲಿಂಗಪ್ಪ ಸುಮಧುರ ಸಂಗೀತ ಹಾಗೂ ಪ್ರಭಾಕರ ಶಾಸ್ತ್ರಿ ಅರ್ಥಗರ್ಭಿತ ಸಾಹಿತ್ಯ ಈ ಹಾಡಿನ ಜೀವವಾಗಿದೆ. ಚಿತ್ರದಲ್ಲಿ ರಾಜ್‌ಕುಮಾರ್ ಜೊತೆಗೆ ಜಯಂತಿ, ಭಾರತಿ ಮತ್ತು ಹಾಸ್ಯ ನಟ ನರಸಿಂಹರಾಜು ಅವರಂತಹ ದಿಗ್ಗಜ ಕಲಾವಿದರು ನಟಿಸಿದ್ದಾರೆ.

ಕನ್ನಡಿಗರಲ್ಲಿ ಹರ್ಷದ ಹೊಳೆ: ಪ್ರಧಾನಿಯವರ ಈ ನಡೆಗೆ ಕನ್ನಡಿಗರು ಮತ್ತು ಅಣ್ಣಾವ್ರ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಮ್ಮ ಅಣ್ಣಾವ್ರ ಕೀರ್ತಿ ದೇಶದ ಪ್ರಧಾನಿಯವರಿಗೂ ತಲುಪಿದೆ ಎನ್ನುವುದು ಹೆಮ್ಮೆಯ ವಿಚಾರ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕನ್ನಡದ ಮೇಲಿರುವ ತಮ್ಮ ಪ್ರೀತಿಯನ್ನು ಪ್ರಧಾನಿ ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂಬ ಮಾತುಗಳು ಸದ್ಯ ಎಲ್ಲಕಡೆಯಿಂದ ಕೇಳಿಬರುತ್ತಿವೆ.