ಬೆಂಗಳೂರು: ಕನ್ನಡ ಸಿನಿರಂಗದ ಯಶಸ್ವಿ ಸರಣಿಗಳಲ್ಲಿ ಒಂದಾದ ‘ಲವ್ ಮಾಕ್ಟೇಲ್’ ಚಿತ್ರದ ಮೂರನೇ ಭಾಗವು ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಕೆಲವು ದಿನಗಳ ಹಿಂದೆ ಈ ಸಿನಿಮಾ ಕುರಿತು ಸಾಕಷ್ಟು ಸುದ್ದಿಗಳು ಗ್ರಾಸವಾಗಿದ್ದವು. ಹಾಗೇ ಚಿತ್ರವು ಅದೆಲ್ಲವನ್ನ ಮೀರಿ 2026ನೇ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹಾಗೇ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿರುವ, ಮತ್ತು ನಾಯಕನಾಗಿ ನಟಿಸಿ ಈ ಚಿತ್ರದ ಭರ್ಜರಿ ಯಶಸ್ಸನ್ನು ಸಂಭ್ರಮಿಸಲು ಚಿತ್ರತಂಡ ಇತ್ತೀಚೆಗೆ ಅದ್ಧೂರಿ ‘ಸಕ್ಸಸ್ ಮೀಟ್’ ಆಯೋಜಿಸಿತ್ತು. ಈ ಸಮಾರಂಭದಲ್ಲಿ ಚಿತ್ರದ ಮೊದಲ ಭಾಗದಿಂದ ಮೂರನೇ ಭಾಗದವರೆಗೆ ಪಾತ್ರಗಳಾಗಿ ಮತ್ತು ಸಹನಡೆದ ಇಡೀ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.
ನಂತರ ಸಿನಿಮಾದ ಯಶಸ್ಸಿಗೆ ಕಾರಣರಾದ ತಂತ್ರಜ್ಞರು, ಪ್ರಚಾರದಲ್ಲಿ ತೊಡಗಿಕೊಂಡವರು ಹಾಗೂ ಮುಖ್ಯವಾಗಿ ಪ್ರೇಕ್ಷಕ ಮಹಾಪ್ರಭುಗಳಿಗೆ ಡಾರ್ಲಿಂಗ್ ಕೃಷ್ಣ ದಂಪತಿ ವೇದಿಕೆಯ ಮೇಲೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿರುವ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯ ಸುಪ್ರೀತ್ ಮಾತನಾಡಿ, “ಇದು ಈ ವರ್ಷದ ಮೊದಲ ದೊಡ್ಡ ಹಿಟ್ ಸಿನಿಮಾ. ಬಿಡುಗಡೆಗೆ ಮುನ್ನವೇ ಕೃಷ್ಣ ನನಗೆ ಸಿನಿಮಾ ತೋರಿಸಿದ್ದರು. ಆ ಬಳಿಕ ‘ಟಾಕ್ಸಿಕ್’ ಸಿನಿಮಾದಿಂದ ತೆರವಾದ ಜಾಗಕ್ಕೆ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ಬಿಡುಗಡೆ ಮಾಡಲಾಯಿತು.
ಅಲ್ಲದೇ..ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಯುಎಸ್‌ಎ, ಆಸ್ಟ್ರೇಲಿಯಾ ಹಾಗೂ ಜರ್ಮನಿ ದೇಶಗಳಲ್ಲೂ ಚಿತ್ರಕ್ಕೆ ಭರ್ಜರಿ ಮುಂಗಡ ಬುಕ್ಕಿಂಗ್ ಆಗುತ್ತಿದೆ” ಎಂದು ಖುಷಿ ಹಂಚಿಕೊಂಡಿದ್ದಾರೆ.
ಚಿತ್ರದ ನಾಯಕಿ ಹಾಗೂ ನಿರ್ಮಾಪಕಿ ಮಿಲನಾ ನಾಗರಾಜ್ “ಮೊದಲ ಎರಡು ಭಾಗಗಳು ಗೆದ್ದಾಗ ಖುಷಿಯಾಗಿತ್ತು. ಆದ್ರೆ ಈ ಮೂರನೇ ಆವೃತ್ತಿಯ ಗೆಲುವು ನನ್ನನ್ನು ಭಾವುಕಳನ್ನಾಗಿಸಿದೆ. ಪ್ರೇಕ್ಷಕರ ಪ್ರೀತಿಯ ಪ್ರತಿಕ್ರಿಯೆಗಳು ಮನ ತುಂಬಿ ಬರುವಂತೆ ಮಾಡಿವೆ” ಎಂದು ಭಾವುಕರಾದರು.
“ನಾವು ಚಿತ್ರರಂಗದಲ್ಲಿ ತುಂಬಾ ಲೆಕ್ಕಾಚಾರದಿಂದ ಹೆಜ್ಜೆ ಇಡುತ್ತೇವೆ. ನಮ್ಮ ತಂಡದಲ್ಲಿರುವ ಪ್ರತಿಯೊಬ್ಬರೂ ಕೇವಲ ತಮ್ಮ ಪ್ರತಿಭೆಯ ಆಧಾರದ ಮೇಲಷ್ಟೇ ಅವಕಾಶ ಪಡೆದಿದ್ದಾರೆ. ಹೀಗಾಗಿ ಯಾರೂ ನಮಗೆ ಧನ್ಯವಾದ ಹೇಳಬೇಕಿಲ್ಲ” ಎಂದ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ, ಇದೇ ಸಂದರ್ಭದಲ್ಲಿ ತಮ್ಮ ‘ಕ್ರಿಸ್‌ಮೀ’ ಬ್ಯಾನರ್ ಅಡಿಯಲ್ಲಿ ಇನ್ನು ಮುಂದೆ ವರ್ಷಕ್ಕೊಂದು ಸಿನಿಮಾ ಮಾಡುವ ಮಹತ್ತರ ಯೋಜನೆಯನ್ನು ಬಗ್ಗೆ ತಿಳಿಸಿದರು.
ಒಟ್ಟಾರೆ..ಸಮಾರಂಭದಲ್ಲಿ ನಟಿಯರಾದ ರೆಚೆಲ್ ಡೇವಿಡ್, ಅಮೃತಾ ಅಯ್ಯಂಗಾರ್, ಹಿರಿಯ ನಟ ಜಗದೀಶ್, ಕೃಷ್ಣ ಅವರ ತಂದೆ ನಾಗಪ್ಪ ಹಾಗೂ ತಂತ್ರಜ್ಞರು ತಮ್ಮ ‘ಲವ್ ಮಾಕ್ಟೇಲ್’ ಯಾನದ ಅನುಭವಗಳನ್ನು ಹಂಚಿಕೊಂಡರು. ಜೊತೆಗೆ ಸಿನಿಮಾದ ಯಶ್ಸಿನ ಹಿಂದೆ ಪಟ್ಟಂತ ಶ್ರಮಕ್ಕೆ ಧನ್ಯವಾದವನ್ನು ತಿಳಿಸಿದರು.























