ಬೆಂಗಳೂರು: ನಿರ್ದೇಶಕ ಪ್ರಶಾಂತ್ ವರ್ಮಾ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಚಿತ್ರ ‘ಮಹಾಕಾಳಿ’ ಇಂದು ಅಧಿಕೃತವಾಗಿ ಘೋಷಣೆ ಕಂಡಿದೆ. ಪ್ರಶಾಂತ್ ವರ್ಮಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಟ ಅಕ್ಷಯ್ ಖನ್ನಾ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
“ದೇವರುಗಳ ನೆರಳಿನಲ್ಲಿ, ದಂಗೆಯ ತೀಕ್ಷ್ಣವಾದ ಜ್ವಾಲೆ ಹೊರಹೊಮ್ಮಿದೆ… ನಟ ಅಕ್ಷಯ್ ಖನ್ನಾ ಮಹಾಕಾಳಿ ಚಿತ್ರದಲ್ಲಿ ಅಸುರಗುರು ಶುಕ್ರಾಚಾರ್ಯರ ಪಾತ್ರ ನಿರ್ವಹಿಸಲಿದ್ದಾರೆ” ಎಂದು ಪ್ರಶಾಂತ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಅಕ್ಷಯ್ ಖನ್ನಾ ಅವರ ಭಿನ್ನ ರೂಪ: ಈ ಸಿನಿಮಾದಲ್ಲಿ ಗುರು ಶುಕ್ರಾಚಾರ್ಯರಾಗಿ ಕಾಣಿಸಿಕೊಳ್ಳುತ್ತಿರುವ ಅಕ್ಷಯ್ ಖನ್ನಾ ಅವರ ಹೊಸ ಲುಕ್ ಈಗಾಗಲೇ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಬಿಳಿ ಬಟ್ಟೆ ತೊಟ್ಟಿರುವ ಖನ್ನಾ ಅವರ ಹಣೆಯ ಮೇಲೆ ಮಚ್ಚೆ, ಕಣ್ಣುಗಳಲ್ಲಿ ತೀಕ್ಷ್ಣ ಬೆಳಕು – ಈ ಲುಕ್‌ನಲ್ಲಿ ಅವರನ್ನು ಮೊದಲ ಬಾರಿ ನೋಡಿದ ಅಭಿಮಾನಿಗಳು ಅವರ ಪರಿವರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಗಂಭೀರ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅಕ್ಷಯ್ ಖನ್ನಾ ಈ ಬಾರಿ ಪೌರಾಣಿಕ ಹಿನ್ನೆಲೆಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಪ್ರೇಕ್ಷಕರು ಅವರನ್ನು ಗುರುತುಹಿಡಿಯಲಾರಷ್ಟು ಬದಲಾದ ಅವರ ಈ ಹೊಸ ಅವತಾರ, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಚರ್ಚೆಯ ಕೇಂದ್ರವಾಗಿದೆ.
ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ: ಈಗಾಗಲೇ ಘೋಷಿತವಾದ ಅಕ್ಷಯ್ ಖನ್ನಾ ಅವರ ಪಾತ್ರ ಹೊರತುಪಡಿಸಿ, ‘ಮಹಾಕಾಳಿ’ಯಲ್ಲಿ ಇನ್ನೂ ಯಾವ ನಟರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನೂ ರಹಸ್ಯವಾಗಿದೆ. ಅಭಿಮಾನಿಗಳು ಮುಂದಿನ ಪಾತ್ರಧಾರಿಗಳ ಘೋಷಣೆಗೆ ಕಾತರದಿಂದ ಕಾಯುತ್ತಿದ್ದಾರೆ.
ಚಿತ್ರದ ಬಿಡುಗಡೆ ದಿನಾಂಕ ಹಾಗೂ ಕಥೆಯ ಸಂಪೂರ್ಣ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಹಳೆಯ ಚಿತ್ರಗಳು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವುದರಿಂದ, ಈ ಸಿನಿಮಾ ಕೂಡ ವಿಶೇಷವಾಗಿರಲಿದೆ ಎಂಬ ಭರವಸೆ ಮೂಡಿಸಿದೆ.
ಅಭಿಮಾನಿಗಳ ಪ್ರತಿಕ್ರಿಯೆ: ಅಕ್ಷಯ್ ಖನ್ನಾ ಅವರ ಫಸ್ಟ್ ಲುಕ್ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಟ್ವಿಟರ್, ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ #Mahakali ಟ್ರೆಂಡ್ ಆಗತೊಡಗಿತು. ಹಲವರು “ಇದು ಅಕ್ಷಯ್ ಖನ್ನಾ ಅವರ ಅತ್ಯಂತ ಶಕ್ತಿಶಾಲಿ ಪಾತ್ರವಾಗಲಿದೆ” ಎಂದು ಕಾಮೆಂಟ್ ಮಾಡಿದ್ದಾರೆ.