Kantara Chapter 1: ಪ್ರೇಕ್ಷಕರಿಗೆ ಹೋಂಬಾಳೆ ವಿಶೇಷ ಮನವಿ

0
41

ತುಳುನಾಡಿನ ಅನನ್ಯ ಸಂಸ್ಕೃತಿ ಮತ್ತು ದೈವಾರಾಧನೆಯನ್ನು ವಿಶ್ವಕ್ಕೆ ಪರಿಚಯಿಸಿದ ‘ಕಾಂತಾರ’ ಚಿತ್ರವು ಕೇವಲ ಒಂದು ಚಲನಚಿತ್ರವಲ್ಲ, ಅದೊಂದು ಭಾವನಾತ್ಮಕ ಅನುಭವ. ನಮ್ಮ ನಂಬಿಕೆ, ಭಕ್ತಿ ಮತ್ತು ತಾಯ್ನಾಡಿನ ಹೆಮ್ಮೆಯ ಪ್ರತೀಕವಾದ ದೈವಾರಾಧನೆಯ ಪ್ರೌಢತೆಯನ್ನು ಈ ಚಿತ್ರವು ಎತ್ತಿಹಿಡಿದಿದೆ.

‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್-1’ ಚಿತ್ರಗಳನ್ನು ದೈವಗಳ ಮಹಿಮೆಯನ್ನು ಗೌರವದಿಂದ ಕೊಂಡಾಡುವ ಸದುದ್ದೇಶದಿಂದಲೇ ನಿರ್ಮಿಸಲಾಗಿದೆ. ದೈವಾರಾಧನೆಯ ಪಾವಿತ್ರ್ಯತೆ ಮತ್ತು ಅಚಲ ಭಕ್ತಿಯನ್ನು ಉಳಿಸಿಕೊಳ್ಳಲು ಹೋಂಬಾಳೆ ಫಿಲ್ಮ್ಸ್ ಶ್ರಮಿಸಿದೆ, ಅದರ ಫಲವಾಗಿ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರವಾಗಿ ಯಶಸ್ವಿಯಾಗಿದೆ.

ಚಿತ್ರದ ನಾಯಕ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಮೂಲಕವೇ ಈ ಕಲಾತ್ಮಕ ಲೋಕವನ್ನು ಅದ್ಭುತವಾಗಿ ತೆರೆದಿಟ್ಟಿದ್ದಾರೆ. ದೈವಪಾತ್ರಗಳ ವೇಷಭೂಷಣ, ದೈವಿಕ ನೃತ್ಯಗಳು, ಮತ್ತು ಕಥಾ ಹಂದರ ಎಲ್ಲವೂ ಸೇರಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿವೆ.

ಚಿತ್ರದ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣವು ದೈವಿಕ ವಾತಾವರಣವನ್ನು ಇನ್ನಷ್ಟು ಗಹನವಾಗಿಸಿವೆ. ‘ವರಾಹ ರೂಪಂ’ ಹಾಡು ದೇಶಾದ್ಯಂತ ಸಂಚಲನ ಮೂಡಿಸಿ, ಕೋಟ್ಯಂತರ ಜನರ ಮನಸ್ಸಿನಲ್ಲಿ ಇನ್ನು ಅಚ್ಚಳಿಯದೆ ಉಳಿದಿದೆ. ಆದರೆ ಇತ್ತೀಚೆಗೆ ಕೆಲವು ಜನರು ಚಿತ್ರದಲ್ಲಿನ ದೈವಪಾತ್ರಗಳನ್ನು ಅನುಕರಿಸುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವುದು ನೋವಿನ ಸಂಗತಿ.

ದೈವಾರಾಧನೆ ಎಂಬುದು ಅತಿ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯ. ಇದನ್ನು ಹಾಸ್ಯಾಸ್ಪದವಾಗಿ ಅಣಕಿಸುವುದು ನಮ್ಮ ನಂಬಿಕೆಗಳಿಗೆ ಧಕ್ಕೆ ತರುತ್ತದೆ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ನೋವುಂಟುಮಾಡುತ್ತದೆ. ಚಿತ್ರಗಳು ದೈವತ್ವವನ್ನು ಆಚರಿಸಲು, ಅಣಕಿಸಲು ಅಲ್ಲ.

ಆದುದರಿಂದ, ಹೋಂಬಾಳೆ ಫಿಲ್ಮ್ಸ್ ಪ್ರೇಕ್ಷಕರಲ್ಲಿ ಮನವಿ ಮಾಡುತ್ತದೆ ದೈವಪಾತ್ರಗಳನ್ನು ಅನುಕರಿಸುವುದು, ಧ್ವನಿಯನ್ನು ಹೋಲುವುದು ಅಥವಾ ವೇಷಧಾರಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ಕೃತ್ಯಗಳಿಂದ ದೂರವಿರಿ. ಚಿತ್ರಮಂದಿರಗಳಲ್ಲಾಗಲಿ, ಸಾರ್ವಜನಿಕ ಸ್ಥಳಗಳಲ್ಲಾಗಲಿ ಇದನ್ನು ಮಾಡಬೇಡಿ.

ದೈವಾರಾಧನೆಯ ಪವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ಆರಾಧನೆಯ ಆಧ್ಯಾತ್ಮಿಕ ಮಹತ್ವವನ್ನು ಎಲ್ಲರೂ ಗುರುತಿಸಿ, ಗೌರವದಿಂದ ನಡೆದುಕೊಳ್ಳೋಣ. ಚಿತ್ರದ ಮೂಲಕ ನಾವು ಸಂಭ್ರಮಿಸಿದ ಈ ನಂಬಿಕೆಗೆ ಯಾವುದೇ ಸಂದರ್ಭದಲ್ಲೂ ಅಪಹಾಸ್ಯವಾಗಲು ಅವಕಾಶ ನೀಡಬಾರದು. ಈ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಪವಿತ್ರತೆಯನ್ನು ಕಾಪಾಡಲು ನಿಮ್ಮ ನಿರಂತರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಮ್ಮ ಹೃತ್ತೂರ್ವಕ ಧನ್ಯವಾದಗಳು ಎಂದಿದ್ದಾರೆ ಹೋಂಬಾಳೆ ಫಿಲ್ಮ್ಸ್.

Previous articleಗಂಗಾವತಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ
Next articleಬಿಹಾರ: ಎನ್‌ಡಿಎ, ಇಂಡಿಯಾ ಸೀಟು ಹಂಚಿಕೆ ಕಸರತ್ತು ಶುರು

LEAVE A REPLY

Please enter your comment!
Please enter your name here