ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ ಚಾಪ್ಟರ್ 1’ ಚಿತ್ರವು ಪ್ರೇಕ್ಷಕರಿಂದ ಮತ್ತು ಚಿತ್ರರಂಗದವರಿಂದ ಭಾರಿ ಪ್ರಶಂಸೆ ಗಳಿಸುತ್ತಿದೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಚಿತ್ರದ ತಯಾರಿಕೆಯ ಸಂದರ್ಭದಲ್ಲಿ ಅನೇಕ ಸವಾಲುಗಳು ಎದುರಾದರೂ, ತಮ್ಮ ದೃಢ ಸಂಕಲ್ಪದಿಂದ ಹಿಂದೆ ಸರಿಯದೆ, ಅದ್ದೂರಿಯಾಗಿ ಚಿತ್ರವನ್ನು ತೆರೆಗೆ ತಂದು ಯಶಸ್ವಿ ಪ್ರದರ್ಶನ ಕಾಣುತ್ತಿರುವುದಕ್ಕೆ ಯಶ್ ಸಂತಸ ವ್ಯಕ್ತಪಡಿಸಿದ್ದಾರೆ.
ಯಶ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ರಿಷಬ್ ಶೆಟ್ಟಿಯವರ ದೃಢನಿಶ್ಚಯ ಮತ್ತು ಚಿತ್ರದ ಮೇಲಿನ ಸಂಪೂರ್ಣ ಭಕ್ತಿ ಪ್ರತಿ ಚೌಕಟ್ಟಿನಲ್ಲೂ ಎದ್ದು ಕಾಣುತ್ತದೆ ಎಂದು ಶ್ಲಾಘಿಸಿದ್ದಾರೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ರಿಷಬ್ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನಗೊಳಿಸುವ ಅನುಭವವನ್ನು ಸೃಷ್ಟಿಸಿದೆ ಎಂದು ಯಶ್ ಹೇಳಿದ್ದಾರೆ.
ಅಂತಹ ಮಹತ್ವಾಕಾಂಕ್ಷೆಯ ಕೆಲಸಗಳಿಗೆ ದೂರದೃಷ್ಟಿ ಮತ್ತು ಬೇಷರತ್ತಾದ ಬೆಂಬಲವು ಸದಾ ಚಿತ್ರೋದ್ಯಮದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಯಶ್ ಅಭಿಪ್ರಾಯಪಟ್ಟಿದ್ದಾರೆ. ಚಿತ್ರದಲ್ಲಿ ನಾಯಕಿ ರುಕ್ಮಿಣಿ ವಸಂತ್ ಅಭಿನಯ, ನಿರ್ಮಾಪಕ ವಿಜಯ್ ಕಿರಗಂದೂರು ಬೆಂಬಲ, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಕ್ಯಾಮರಾ ಕೆಲಸಕ್ಕೆ ಯಶ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುಲ್ಷನ್ ದೇವಯ್ಯ, ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಸೇರಿದಂತೆ ಇಡೀ ಚಿತ್ರತಂಡದ ಶ್ರಮವನ್ನು ಯಶ್ ಕೊಂಡಾಡಿದ್ದಾರೆ. ರಾಕೇಶ್ ಪೂಜಾರಿ ಅವರ ಪ್ರತಿಭೆಗೆ ಸೂಕ್ತವಾದ ಗೌರವ ಸಿಕ್ಕಿದೆ ಎಂದಿದ್ದಾರೆ.
ರಿಷಬ್ ಶೆಟ್ಟಿ ಪ್ರತಿಕ್ರಿಯೆ: ಯಶ್ ಪ್ರಶಂಸೆಗೆ ಪ್ರತಿಕ್ರಿಯಿಸಿರುವ ರಿಷಬ್ ಶೆಟ್ಟಿ, ಯಶ್ ಪಯಣ ಮತ್ತು ದೃಷ್ಟಿಕೋನವು ಸದಾ ತಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಅವರ ಸಾಧನೆಯನ್ನು ಇಂದು ನಿಂತು ನೋಡುವುದು ನನಗೆ ಹೆಮ್ಮೆಯ ಸಂಗತಿ. ತಮ್ಮ ಜೊತೆ ನಿಂತು, ತಮ್ಮ ಕೆಲಸಕ್ಕೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು ಎಂದು ರಿಷಬ್ ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಕೂಡ ‘ಕಾಂತಾರ’ ಚಿತ್ರ ನೋಡಿ ಮನಸ್ಸಿಗೆ ಮುದವಾಯಿತು ಎಂದು ಹಂಚಿಕೊಂಡಿದ್ದಾರೆ.
ಈ ಚಿತ್ರವು ಕೇವಲ ಒಂದು ಕಥೆಯಲ್ಲ, ಅದೊಂದು ಅನುಭವ. ರಿಷಬ್ ಶೆಟ್ಟಿ ಪ್ರತಿಭೆ ಮತ್ತು ತಂಡದ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಿದು. ‘ಕಾಂತಾರ: ಚಾಪ್ಟರ್ 1’ ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡವನ್ನು ಸ್ಥಾಪಿಸಿದೆ ಎಂಬುದರಲ್ಲಿ ಸಂದೇಹವಿಲ್ಲ.