ಉಡುಪಿ: ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಹಾಗೂ ಕಲಾ ನಿರ್ದೇಶಕ ದಿನೇಶ್ ಅವರು ಶನಿವಾರ ಮುಂಜಾನೆ 3:30ರ ಸುಮಾರಿಗೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಿಧನ ಹೊಂದಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಮೆದುಳಿನಲ್ಲಿ ಬೈನ್ ಹೆಮರೇಜ್ ಉಂಟಾದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಲೋಕ ತ್ಯಜಿಸಿದರು.
ಪೋಷಕ ಹಾಗೂ ಖಡಕ್ ವಿಲನ್ ಪಾತ್ರಗಳಲ್ಲಿ ಮಿಂಚಿದ ಕಲಾವಿದ: ದಿನೇಶ್ ಅವರು ಪೋಷಕ ಪಾತ್ರಗಳ ಜೊತೆಗೆ ಖಡಕ್ ನೆಗೆಟಿವ್ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ‘ರಿಕ್ಕಿ’, ‘ಉಳಿದವರು ಕಂಡಂತೆ’, ‘ಕೆಜಿಎಫ್’, ‘ರಣ ವಿಕ್ರಮ’, ‘ಅಂಬಾರಿ’, ‘ಸವಾರಿ’, ‘ಇಂತಿ ನಿನ್ನ ಪ್ರೀತಿಯ’, ‘ಆ ದಿನಗಳು’, ‘ಸ್ಲಂ ಬಾಲ’, ‘ದುರ್ಗಿ’, ‘ಸ್ಟೈಲ್’, ‘ಅತಿಥಿ’, ‘ಪ್ರೇಮ’, ‘ನಾಗ ಮಂಡಲ’, ‘ಶುಭಂ’ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.
ಅವರ ನೈಜ ಅಭಿನಯ ಶೈಲಿ ಮತ್ತು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರಲ್ಲಿ ಸದಾ ನೆನಪಾಗುವಂತಾದರು.
ಕಲಾ ನಿರ್ದೇಶಕರಾಗಿ ಆರಂಭದ ದಿನಗಳು: ನಟನಾಗುವ ಮುನ್ನ ದಿನೇಶ್ ಹಲವು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಪ್ರಾರ್ಥನೆ’, ‘ತುಗ್ಲಕ್’, ‘ಬೆಟ್ಟದ ಜೀವ’, ‘ಸೂರ್ಯ ಕಾಂತಿ’, ‘ಜಸ್ಟ್ ಪಾಸ್ (35/100)’, ‘ನಾನು ನನ್ನ ಕನಸು’, ‘ಮೊದಲ ಸಲ’, ‘ವೀರ ಮದಕರಿ’, ‘ವಾಯುಪುತ್ರ’, ‘ರಾವಣ’, ‘ದರೋಡೆ’, ‘ಮಾಸ್ತಿ’, ‘ನಂ.73 ಶಾಂತಿ ನಿವಾಸ’, ‘ಗಂಡುಗಲಿ ಕುಮಾರರಾಮ’, ‘ಬೇರು’, ‘ರಾಕ್ಷಸ’, ‘ಓಂಕಾರ’, ‘ಕಿಚ್ಚ’, ‘ಸೈನಿಕ’, ‘ಕೃಷ್ಣ ಲೀಲೆ’, ‘ಹಾಲಿವುಡ್’, ‘ದಿಗ್ಗಜರು’ ಸೇರಿದಂತೆ ಅನೇಕ ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಅಂತಿಮ ವಿಧಿ ವಿಧಾನಗಳು: ಇಂದು ಸಂಜೆ ದಿನೇಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ. ನಾಳೆ (ಆಗಸ್ಟ್ 26) ಬೆಳಿಗ್ಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಚಿತ್ರರಂಗದ ಸಂತಾಪ: ದಿನೇಶ್ ಅವರ ನಿಧನವು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಅನೇಕ ಕಲಾವಿದರು, ನಿರ್ದೇಶಕರು ಮತ್ತು ಅಭಿಮಾನಿಗಳು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಕಲಾವಿದನಾಗಿ ಹಾಗೂ ಕಲಾ ನಿರ್ದೇಶಕರಾಗಿ ಎರಡು ಹಂತಗಳಲ್ಲಿ ಸೇವೆ ಸಲ್ಲಿಸಿದ ಅವರು, ಸದಾ ಸ್ಮರಣೀಯರಾಗಿಯೇ ಉಳಿಯಲಿದ್ದಾರೆ.