ಖ್ಯಾತ ಗಾಯಕ, ನಟ ಪ್ರಶಾಂತ್ ತಮಾಂಗ್‌ ನಿಧನ

0
5

ನವದೆಹಲಿ: ಕಡಿಮೆ ವಯಸ್ಸಿನಲ್ಲೇ ಅಪಾರ ಜನಪ್ರಿಯತೆ ಗಳಿಸಿ, ಸಂಗೀತ ಹಾಗೂ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಗಾಯಕ–ನಟ ಪ್ರಶಾಂತ್ ತಮಾಂಗ್ ಅವರು ಭಾನುವಾರ (ಜನವರಿ 11) ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ಸಮಯದಿಂದ ಪಾರ್ಶ್ವವಾಯು (ಸ್ಟ್ರೋಕ್) ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಪ್ರಶಾಂತ್ ತಮಾಂಗ್ ಅವರ ನಿಧನದ ಸುದ್ದಿ ಕೇಳಿ ಕಲೆ, ಸಂಗೀತ ಮತ್ತು ಚಿತ್ರರಂಗ ಮಾತ್ರವಲ್ಲದೆ ಗೂರ್ಖಾ ಸಮುದಾಯವೂ ತೀವ್ರ ಶೋಕದಲ್ಲಿ ಮುಳುಗಿದೆ. ಸಣ್ಣ ವಯಸ್ಸಿನಲ್ಲೇ ಜನಮನ ಗೆದ್ದ ಅವರು, ತಮ್ಮ ಸರಳತೆ ಮತ್ತು ಪ್ರತಿಭೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು.

ಇದನ್ನೂ ಓದಿ:  ಬಡವರ ಸೇಬು ಖ್ಯಾತಿಯ ಬಾರೆ ಹಣ್ಣು: ರೈತರ ಬದುಕಿಗೆ ಹೊಸ ದಿಕ್ಕು

ಇಂಡಿಯನ್ ಐಡಲ್ ಮೂಲಕ ದೇಶವ್ಯಾಪಿ ಖ್ಯಾತಿ: ಜನವರಿ 4, 1983ರಂದು ಡಾರ್ಜಿಲಿಂಗ್‌ನಲ್ಲಿ ಜನಿಸಿದ ಪ್ರಶಾಂತ್ ತಮಾಂಗ್, ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಜೀವನದ ಕಠಿಣ ಸವಾಲುಗಳನ್ನು ಎದುರಿಸಿದ್ದರು. ಬದುಕು ಸಾಗಿಸಲು ಅವರು ಕೋಲ್ಕತ್ತಾ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸಿದ್ದರು. ಪೊಲೀಸ್ ಸೇವೆಯಲ್ಲಿದ್ದಾಗಲೇ ಪೊಲೀಸ್ ಆರ್ಕೆಸ್ಟ್ರಾ ಮೂಲಕ ಸಂಗೀತದ ಮೇಲೆ ಆಸಕ್ತಿ ಬೆಳೆಸಿಕೊಂಡರು.

2007ರಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯನ್ ಐಡಲ್ – ಸೀಸನ್ 3’ನಲ್ಲಿ ಭಾಗವಹಿಸಿ, ತಮ್ಮ ಸೊಗಸಾದ ಗಾಯನದಿಂದ ದೇಶದ ಜನಮನ ಗೆದ್ದು ವಿಜೇತರಾಗಿ ಹೊರಹೊಮ್ಮಿದರು. ಈ ಗೆಲುವು ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಇಂಡಿಯನ್ ಐಡಲ್ ಗೆಲುವಿನ ಬಳಿಕ ಅವರು ರಾಷ್ಟ್ರವ್ಯಾಪಿ ಖ್ಯಾತಿಯನ್ನು ಗಳಿಸಿದರು.

ಇದನ್ನೂ ಓದಿ:  ಭಾರತೀಯ ಅಂತರಿಕ್ಷ ನಿಲ್ದಾಣಕ್ಕೆ ಶತಪ್ರಯತ್ನ

ಸಂಗೀತ ಹಾಗೂ ಅಭಿನಯದಲ್ಲಿ ವಿಭಿನ್ನ ಗುರುತು: ಗಾಯನ ಕ್ಷೇತ್ರದಲ್ಲಿ ಮಾತ್ರವಲ್ಲದೆ, ನಟನಾಗಿಯೂ ಪ್ರಶಾಂತ್ ತಮಾಂಗ್ ಜನಪ್ರಿಯತೆ ಗಳಿಸಿದ್ದರು. ಅವರು ‘ಧನ್ಯವಾದ್’ ಎಂಬ ಆಲ್ಬಂಗೆ ಧ್ವನಿ ನೀಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದರು. 2010ರಲ್ಲಿ ಬಿಡುಗಡೆಯಾದ ನೇಪಾಳಿ ಹಿಟ್ ಚಿತ್ರ ‘ಗೂರ್ಖಾ ಪಲ್ಟಾನ್’ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಅಂಗಲೋ ಯೋ ಮಾಯಾ ಕೋ, ಕಿನಾ ಮಾಯಾ ಮಾ, ನಿಶಾನಿ, ಪರ್ದೇಸಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದರು.

ಇತ್ತೀಚಿನ ವರ್ಷಗಳಲ್ಲಿ ಅವರು ವೆಬ್ ಸಿರೀಸ್‌ಗಳಲ್ಲೂ ಅಭಿನಯಿಸಿದ್ದು, ಜನಪ್ರಿಯ ಸಿರೀಸ್ ‘ಪಾತಾಲ್ ಲೋಕ್’ ಸೀಸನ್ 2ನಲ್ಲಿ ಡೇನಿಯಲ್ ಲೆಚೊ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:  ʼರಕ್ಕಸಪುರ’ದಿಂದ ಬಂದ ʼನೀನಾ… ನೀನೇನಾʼ ಮೆಲೋಡಿ ಹಾಡು

ಡಾರ್ಜಿಲಿಂಗ್‌ನ ಸಂಸತ್ ಸದಸ್ಯ ಹಾಗೂ ಬಿಜೆಪಿಯ ರಾಷ್ಟ್ರೀಯ ವಕ್ತಾರ ರಾಜು ಬಿಸ್ತಾ ಅವರು ಪ್ರಶಾಂತ್ ತಮಾಂಗ್ ನಿಧನಕ್ಕೆ ಸಂತಾಪ ಸೂಚಿಸಿ, “ಜನಪ್ರಿಯ ಗಾಯಕ ಮತ್ತು ನಟ ಪ್ರಶಾಂತ್ ತಮಾಂಗ್ ಅವರ ಅಕಾಲಿಕ ನಿಧನವು ಗೂರ್ಖಾ ಸಮುದಾಯ ಮಾತ್ರವಲ್ಲದೆ ಇಡೀ ಕಲೆ ಮತ್ತು ಸಂಗೀತ ಜಗತ್ತನ್ನು ದಿಗ್ಧಮೆಗೊಳಿಸಿದೆ. ಇದು ಹೃದಯ ವಿದ್ರಾವಕ ಘಟನೆ” ಎಂದು ಹೇಳಿದ್ದಾರೆ.

ಪ್ರಶಾಂತ್ ತಮಾಂಗ್ ಅವರ ಅಗಲಿಕೆಯಿಂದ ಒಂದು ಪ್ರಖರ ಪ್ರತಿಭೆ, ಪ್ರೇರಣಾದಾಯಕ ಜೀವನಕಥೆ ಮತ್ತು ಜನಪ್ರಿಯ ಕಲಾವಿದನನ್ನು ಕಳೆದುಕೊಂಡಂತಾಗಿದೆ ಎಂಬ ಅಭಿಪ್ರಾಯ ಅಭಿಮಾನಿಗಳಲ್ಲಿ ವ್ಯಕ್ತವಾಗಿದೆ.

Previous articleಸಂಕ್ರಾಂತಿ ನಂತರ ಸರ್ಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ