ಚೆನ್ನೈ: 2015-16ನೇ ಸಾಲಿನ ಆದಾಯ ಘೋಷಣೆ ಮಾಡದಿದ್ದಕ್ಕೆ ನಟ, ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ಗೆ 1.5 ಕೋಟಿ ರೂ. ದಂಡ ವಿಧಿಸಿದ್ದ ಆದಾಯ ತೆರಿಗೆ ಇಲಾಖೆ ಕ್ರಮವನ್ನು ಪ್ರಶ್ನಿಸಿದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ತಳ್ಳಿಹಾಕಿದೆ.
2015-16ರ ಆರ್ಥಿಕ ಸಾಲಿನಲ್ಲಿ ಆದಾಯ ಘೋಷಿಸದ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ನಟ ವಿಜಯ್‌ಗೆ 1.50 ಕೋಟಿ ರೂ. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು ಈ ಕುರಿತಂತೆ ವಿಜಯ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೆಂಥಿಲ್‌ಕುಮಾರ್ ರಾಮಮೂರ್ತಿ ಪೀಠ, ಆದಾಯ ತೆರಿಗೆ ಇಲಾಖೆಯ ಕ್ರಮವನ್ನು ಎತ್ತಿಹಿಡಿದಿದೆ.
ಪ್ರಕರಣ ಹಿನ್ನೆಲೆ: 2016-17ನೇ ಸಾಲಿನಲ್ಲಿ 35.42 ಕೋಟಿ ಆದಾಯ ಘೋಷಿಸಿದ್ದಾರೆ. ಆದರೆ 2015ರಲ್ಲಿ ವಿಜಯ್ ನಿವಾಸದ ಮೇಲೆ ನಡೆಸಿದ ದಾಳಿ ವೇಳೆ ಪುಲಿ ಸಿನಿಮಾದಿಂದ ಬಂದ 15 ಕೋಟಿ ರೂ. ಆದಾಯವನ್ನು ಘೋಷಿಸಲಾಗಿಲ್ಲ. ಹೀಗಾಗಿ 1.5 ಕೋಟಿ ದಂಡ ಪಾವತಿಸಬೇಕೆಂದು ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.
ದಾಖಲೆಗಳ ಪರಿಶೀಲನೆಗಳ ಆಧಾರದಲ್ಲಿ 2022ರ ಜೂನ್ 30ರಂದು ವಿಜಯ್ ಮೇಲೆ ₹1.50 ಕೋಟಿ ದಂಡ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ವಿಜಯ್ ಮೇಲ್ಮನವಿ ಸಲ್ಲಿಸಿದ್ದರು.























