Home Advertisement
Home ಸಿನಿ ಮಿಲ್ಸ್ ದರ್ಶನ್ ಗನ್ ಲೈಸೆನ್ಸ್ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ದರ್ಶನ್ ಗನ್ ಲೈಸೆನ್ಸ್ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

0
7

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ನಟ ದರ್ಶನ್ ತೂಗುದೀಪ ಅವರ ಗನ್ ಲೈಸೆನ್ಸ್ ಅಮಾನತುಗೊಳಿಸಿ ಪೊಲೀಸರು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ಮೂಲಕ ದರ್ಶನ್‌ಗೆ ದೊಡ್ಡ ಮಟ್ಟದ ಕಾನೂನು ಜಯ ಸಿಕ್ಕಿದೆ.

ತಮಗೆ ಮಂಜೂರಾಗಿದ್ದ ಶಸ್ತ್ರಾಸ್ತ್ರ ಪರವಾನಗಿ ಅಮಾನತುಗೊಳಿಸಿದ್ದ ಕ್ರಮ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅಲ್ಲದೆ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಆಡಳಿತ ವಿಭಾಗದ ಡಿಸಿಪಿಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರರು ಶಸ್ತ್ರಾಸ್ತ್ರ ಕಾಯಿದೆಯ ಅಡಿಯಲ್ಲಿ 2008ರಲ್ಲಿ ಪಿಸ್ತೂಲ್ ಹೊಂದಲು ಪರವಾನಗಿಯನ್ನು ಪಡೆದುಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಪಡೆದುಕೊಂಡಿದ್ದ ಸಂದರ್ಭದಲ್ಲಿ ಪರವಾನಗಿ ಅಮಾನತು ಮಾಡಲಾಗಿದೆ. ಶಸ್ತ್ರಾಸ್ತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಕಾರಣದಿಂದ ಈ ಆದೇಶ ಮಾಡಿದೆ. ಆದರೆ, ಅರ್ಜಿದಾರರಿಗೆ ಇದೀಗ ಜಾಮೀನು ರದ್ದಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ತಮ್ಮ ಬಳಿಯಿದ್ದ ಶಸ್ತ್ರಾಸ್ತ್ರವನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ ಎಂಬುದಾಗಿ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಆದ್ದರಿಂದ ಮುಂದಿನ ವಿಚಾರಣೆಯವರೆಗೂ ಆಡಳಿತ ವಿಭಾಗದ ಡಿಸಿಪಿ ಆದೇಶಕ್ಕೆ ತಡೆ ನೀಡಲಾಗುತ್ತಿದೆ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿತು.

Previous articleಕಾಂಗ್ರೆಸ್ಸಿಗರು ಬೆತ್ತಲಾದರೂ ರಾಮ್‌ಜಿ ಕಾಯ್ದೆ ಜಾರಿ ತಡೆಯಲಾಗದು
Next articleಜಾರ್ಖಂಡ್‌ನಲ್ಲಿ ಏರ್ ಆಂಬ್ಯುಲೆನ್ಸ್ ಪತನ