ಪರಭಾಷೆ ಸಿನಿಮಾಕ್ಕೆ ಕಡಿವಾಣ ಹಾಕಿ, ಕನ್ನಡ ಚಿತ್ರರಂಗ ಉಳಿಸಿ ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ರಾಮನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ಸಾರಥ್ಯದಲ್ಲಿ ಜಮಾವಣೆಗೊಂಡ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕನ್ನಡ ಚಿತ್ರರಂಗದ ಉಳಿವಿಗಾಗಿ ಘೋಷಣೆ ಕೂಗಿದರು.
ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಹಾವಳಿ ತಡೆಗಟ್ಟಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಮಾಧ್ಯಮದವರ ಜೊತೆ ಮಾತನಾಡಿದ ವಾಟಳ್ ನಾಗರಾಜ್, “ಪರಭಾಷೆ ಚಿತ್ರಗಳಿಂದ ಕನ್ನಡ ಚಿತ್ರಗಳು ನೆಲಕಚ್ಚುತ್ತಿವೆ. ಪರಭಾಷೆ ಸಿನಿಮಾಗಳ ಹಾವಳಿಯಿಂದ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಉಂಟಾಗುತ್ತಿದೆ” ಎಂದರು.
“ಬೇರೆ ರಾಜ್ಯಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರದರ್ಶನದ ವ್ಯವಸ್ಥೆ ಇಲ್ಲ. ಇಂದು ಕನ್ನಡ ಚಿತ್ರರಂಗವನ್ನು ಉಳಿಸಲು ಹೋರಾಟ ನಡೆಸುವ ಅಗತ್ಯತೆ ಇದೆ” ಎಂದು ವಾಟಾಳ್ ನಾಗರಾಜ್ ಅಭಿಪ್ರಾಯಪಟ್ಟರು.
“62ರ ದಶಕದಲ್ಲಿ ಪರಭಾಷೆ ಚಿತ್ರ ಪ್ರದರ್ಶನ ಕಾಣುತ್ತಿದ್ದ ಅಲಂಕಾರ್ ಚಿತ್ರಮಂದಿರಕ್ಕೆ ನುಗ್ಗಿ ಸ್ಕ್ರೀನ್‌ಗೆ ಬೆಂಕಿ ಇಟ್ಟಿದ್ದೆ. ಅಂದು ಪೊಲೀಸರು ನನ್ನ ಬಂಧಿಸಿದ್ದಲ್ಲದೇ ಬೂಟಿನೇಟು ಕೊಟ್ಟಿದ್ದರು” ಎಂದು ನೆನಪು ಮಾಡಿಕೊಂಡರು.
“ಕನ್ನಡ ಭಾಷೆ ಹಾಗೂ ಕನ್ನಡ ಚಿತ್ರರಂಗದ ಪರ ಹೋರಾಟ ನಿಲ್ಲಿಸಲಿಲ್ಲ. ಇಂದು ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮುಚ್ಚಿದೆ. ಕಂಠೀರವ ಸ್ಟುಡಿಯೋ ಮುಚ್ಚುವ ಹಂತದಲ್ಲಿದೆ. ಕಂಠೀರವ ಸ್ಟುಡಿಯೋದ ಬೆಳವಣಿಗೆಗೆ ಸರ್ಕಾರ ಕ್ರಮ ವಹಿಸಬೇಕು. ಹೆಚ್ಚಿನ ಚಿತ್ರಗಳು ಅಲ್ಲಿ ಚಿತ್ರೀಕರಣ ಆಗುವಂತೆ ಸೌಲಭ್ಯ ಒದಗಿಸಬೇಕು” ಎಂದು ವಾಟಾಳ್ ಒತ್ತಾಯಿಸಿದರು.
“ಪರಭಾಷೆ ಸಿನಿಮಾಗಳ ಹಾವಳಿಗೆ ಸರ್ಕಾರ ಬ್ರೇಕ್ ಹಾಕಬೇಕು. ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ಕೊಡಬೇಕು. ಪರಭಾಷೆ ಚಿತ್ರಗಳನ್ನ ಹೆಚ್ಚು ಪ್ರೋತ್ಸಾಹಿಸಬಾರದು. ಇನ್ನು ವಾಣಿಜ್ಯ ಮಂಡಳಿ ಅಧ್ಯಕ್ಷರು ಬೇರೆ ಭಾಷೆಯವರಾಗಿದ್ದಾರೆ. ವಾಣಿಜ್ಯ ಮಂಡಳಿಗೆ ಕನ್ನಡಿಗರೇ ಅಧ್ಯಕ್ಷರಾಗಬೇಕು” ಎಂದು ಆಗ್ರಹಿಸಿದರು.
“ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಜತೆಗೆ ಥಿಯೇಟರ್ ಸಮಸ್ಯೆ ಉಂಟಾಗದಂತೆ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ಕೊಡಬೇಕು. ಕನ್ನಡಗಳಿಗೆ ಹೆಚ್ಚಿನ ಸಬ್ಸಿಡಿ ನೀಡಬೇಕು. ಈ ಕುರಿತು ಸರ್ಕಾರ ಕ್ರಮ ವಹಿಸಿದಿದ್ದಲ್ಲಿ ಚಿತ್ರರಂಗದ ಪರ ನಾವು ಗಂಭೀರವಾಗಿ ಹೋರಾಟ ಮಾಡಲು ಚಿಂತನೆ ನಡೆಸಲಾಗಿದ್ದು, ಕನ್ನಡ ವಾಟಾಳ್ ಪಕ್ಷದ ನೇತೃತ್ವದಲ್ಲಿ ನವೆಂಬರ್‌ನಿಂದ ಹೋರಾಟ ಆರಂಭಿಸಲಾಗುತ್ತದೆ” ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.