ಬೆಂಗಳೂರು: ದರ್ಶನ್ ಸೇರಿದಂತೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ 6 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ಗುರುವಾರ ರದ್ದುಪಡಿಸಿತ್ತು. ಆರೋಪಿಗಳು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗ ಆರೋಪಿಗಳಿಗೆ ಎರಡು ಸಂಕಷ್ಟ ಎದುರಾಗಿದೆ.
ಸುಪ್ರೀಂಕೋರ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿ ಪವಿತ್ರಾ ಗೌಡ, 2ನೇ ಆರೋಪಿ ದರ್ಶನ್, ಜಗದೀಶ್, ಅನು ಕುಮಾರ್, ಪ್ರದೋಶ್, ನಾಗರಾಜು, ಲಕ್ಷ್ಮಣ್ ಜಾಮೀನು ರದ್ದುಗೊಳಿಸುವಾಗ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ಮನವಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಇದರಿಂದಾಗಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳಿಗೆ ಢವಢವ ಶುರುವಾಗಿದೆ.
7 ಆರೋಪಿಗಳ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್ 6 ತಿಂಗಳಲ್ಲಿ ಟ್ರಯಲ್ ಮುಗಿಸಿ ಎಂದು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ಕ್ರಮಕ್ಕಾಗಿ ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಸೋಮವಾರ ಸರ್ಕಾರಕ್ಕೆ ಮನವಿ ಮಾಡುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ನಡುವೆ ನಟ ದರ್ಶನ್ ತಲೆ ಬೋಳಿಸಿಕೊಂಡಿರುವುದು, ಪವಿತ್ರ ಗೌಡ ನಗುತ್ತಾ ನಿಂತಿರುವ ಫೋಟೋಗಳು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಾಹಿತಿಗಳ ಪ್ರಕಾರ ಇದು ಗುರುವಾರ ರಾತ್ರಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ತೆಗೆದಿರುವ ಚಿತ್ರಗಳು. ಪರಪ್ಪನ ಅಗ್ರಹಾರ ಜೈಲಿನಲ್ಲಿ ತೆಗೆದ ಫೋಟೋಗಳಲ್ಲ.
ರಾಜಾತಿಥ್ಯ ವಿಚಾರ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿಗೆ ಬೆಂಗಳೂರು ಜೈಲು ಸೇರಿದ್ದಾಗ ದರ್ಶನ್‌ಗೆ ರಾಜ್ಯಾತಿಥ್ಯ ನೀಡಿದ ವಿಷಯ ಭಾರಿ ಚರ್ಚೆಗೆ ಗಾಸವಾಗಿತ್ತು. ನಂತರ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ವರ್ಗಾಯಿಸಲಾಗಿತ್ತು. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಅನಾರೋಗ್ಯದ ನೆಪ ನೀಡಿ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು.
ಈಗ ದರ್ಶನ್ ಹಾಗೂ ಪವಿತ್ರಾ ಗೌಡ ಫೋಟೋ ಪರಪ್ಪನ ಅಗ್ರಹಾರದ್ದು ಎಂಬ ಬರಹದೊಂದಿಗೆ ವೈರಲ್ ಆಗುತ್ತಿದೆ. ಸೋಮವಾರ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಲು ಜೈಲಿನ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಕೆ ಮಾಡಲು ತಯಾರಿ ನಡೆಸಿದ್ದಾರೆ.
ಸುಪ್ರೀಂಕೋರ್ಟ್ ಆರೋಪಿಗಳ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದಾಗ ಆರೋಪಿಗಳಿಗೆ ಜೈಲಿನಲ್ಲಿ ಯಾವುದೇ ರೀತಿಯ ರಾಜಾತಿಥ್ಯ ನೀಡಿದರೆ, ಜೈಲಾಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಆದ್ದರಿಂದ ಅಧಿಕಾರಿಗಳು ನಿಯಮ ಪಾಲನೆ ಮಾಡುತ್ತಿದ್ದಾರೆ.
ಕಳೆದ ಬಾರಿ ದರ್ಶನ್‌ಗೆ ಮನೆ ಊಟದ ವ್ಯವಸ್ಥೆ ಇತ್ತು. ಆದರೆ, ಈ ಬಾರಿ ಅದಕ್ಕೆ ಬ್ರೇಕ್ ಬಿದ್ದಿದೆ. ಜೈಲಿನ ಮ್ಯಾನ್ಯುಯಲ್ ಪ್ರಕಾರವೇ ಅಧಿಕಾರಿಗಳು ನಡೆಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ದರ್ಶನ್ ಜೈಲಿನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಈಗ ಬೇರೆ ಜೈಲಿಗೆ ಶಿಫ್ಟ್ ಆಗುವ ಆತಂಕವೂ ಎದುರಾಗಿದೆ.