ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ಮನೆ ಕಟ್ಟಿದ್ರೂ ಮರು ವಶ: ಖಂಡ್ರೆ

0
23

ಬೆಂಗಳೂರು: ಅಭಿಮಾನ್ ಸ್ಟುಡಿಯೋಗೆ ನೀಡಲಾಗಿದ್ದ ಜಾಗವನ್ನು ಪರಭಾರೆ ಮಾಡಲಾಗಿದ್ದರೆ, ಈ ಜಾಗದಲ್ಲಿ ಮನೆ ನಿರ್ಮಾಣವಾಗಿದ್ದರೂ ಅದನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿ, ದಿವಂಗತ ಬಾಲಕೃಷ್ಣ ಅವರಿಗೆ ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಾಗ ವಿಧಿಸಿದ್ದ ಷರತ್ತು ಉಲ್ಲಂಘನೆ ಮಾಡಲಾಗಿದೆ. ಇದರಿಂದಾಗಿಯೇ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಸಲು ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಿಂದ ವಿಷ್ಣುವರ್ಧನ್ ಸ್ಮಾರಕ ಕುರಿತಂತೆ ಮನವಿ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಲಸಂದ್ರ ಗ್ರಾಮದ ಸರ್ವೆ ನಂ. 26ರಲ್ಲಿ 62 ಎಕರೆ 20 ಗುಂಟೆ ಪ್ರದೇಶವನ್ನು ತುರಹಳ್ಳಿ ರಾಜ್ಯ ಅರಣ್ಯ ಎಂದು ಘೋಷಿಸಿ ಮೈಸೂರು ಸರ್ಕಾರ 1935ರಲ್ಲಿ ಅಧಿಸೂಚನೆ ಹೊರಡಿಸಿತ್ತು.

1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬರುವ ಮೊದಲು ಈ ಅರಣ್ಯ ಭೂಮಿಯ ಪೈಕಿ 20 ಎಕರೆ ಪ್ರದೇಶವನ್ನು ಖ್ಯಾತ ಚಿತ್ರನಟ ಟಿ.ಎನ್. ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಿಸುವ ಸಲುವಾಗಿ 1969 ಒಂದು ಎಕರೆಗೆ 300 ರೂ. ನಂತೆ ಒಟ್ಟು 6,000 ರೂಗಳಿಗೆ 20 ಎಕರೆ ಪ್ರದೇಶವನ್ನು ಷರತ್ತುಬದ್ಧವಾಗಿ ಮಂಜೂರು ಮಾಡಲಾಗಿತ್ತು ಎಂದು ತಿಳಿಸಿದರು.

2003ರಲ್ಲಿ 10 ಎಕರೆ ಪ್ರದೇಶವನ್ನು ದಿವಂಗತ ಬಾಲಕೃಷ್ಣ ಅವರ ಮಕ್ಕಳು ಸರ್ಕಾರದಿಂದ ಪೂರ್ವಾನುಮತಿ ಪಡೆದು ಮಾರಾಟ ಮಾಡಿರುತ್ತಾರೆ. ಮಾರಾಟಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿಯೂ ಮಾರಾಟದಿಂದ ಬಂದ ಹಣದಿಂದ ಸ್ಟುಡಿಯೋ ಅಭಿವೃದ್ಧಿಪಡಿಸುವಂತೆ ಮತ್ತೆ ಷರತ್ತು ಹಾಕಲಾಗಿರುತ್ತದೆ. ಆದರೆ ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಬದಲಾಗಿ ಈಗ ಉಳಿದ 10 ಎಕರೆ ಜಮೀನನ್ನೂ ಮಾರಾಟ ಮಾಡಲು ಮುಂದಾಗಿರುವುದು ಷರತ್ತಿನ ಉಲ್ಲಂಘನೆಯಾಗಿದ್ದು, ಸದರಿ ಅರಣ್ಯ ಭೂಮಿಯನ್ನು ಇಲಾಖೆಗೆ ಮರಳಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

ವಿಷ್ಣು ಸ್ಮಾರಕ ಜಾಗ ಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ: “ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಕೇಳಿದ್ದಾರೆ. ಅವರು ಕೇಳುವುದು ತಪ್ಪೇನೂ ಅಲ್ಲ. ನಾನು ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸುತ್ತೇನೆ. ನಂತರ ಆ ಬಗ್ಗೆ ಸರ್ಕಾರ ಅಗತ್ಯ ನಿರ್ಧಾರವನ್ನು ತೆಗೆದುಕೊಳ್ಳುವ ತೀರ್ಮಾನ ಮಾಡುತ್ತೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

Previous articleಬೆಳಗಾವಿ: 15 ವರ್ಷದ ಬಾಲಕಿ ವಿವಾಹವಾಗಿ ಗ್ರಾ.ಪಂ ಅಧ್ಯಕ್ಷನಿಂದಲೇ ಅಪರಾಧ
Next articleಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌: ಸಾಯಿರಾಜ್ ದಾಖಲೆ

LEAVE A REPLY

Please enter your comment!
Please enter your name here