ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರ ನಿರ್ಮಾಣ ಸಂಸ್ಥೆ Dolly Pictures ಅಡಿಯಲ್ಲಿ, ZEE5 ಮೂಲಕ ಬಿಡುಗಡೆಯಾಗಲಿರುವ ಹೊಸ ಕನ್ನಡ ವೆಬ್ ಸರಣಿಯ ಪ್ರೋಮೋ ಬಿಡುಗಡೆಯಾಗಿ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
“ಜೆರಾಕ್ಸ್ (Xerox)” ಎಂಬ ಹೆಸರಿನ ಈ ವೆಬ್ ಸರಣಿ, ಪ್ರತಿ ಎಪಿಸೋಡ್‌ನಲ್ಲೂ ಹೊಸ ಟ್ವಿಸ್ಟ್ ನೀಡುವ ಥ್ರಿಲ್ಲರ್ ಶೈಲಿಯಲ್ಲಿರಲಿದೆ ಎಂದು ಪ್ರೋಮೋ ಸೂಚಿಸಿದೆ. “ಪ್ರತಿ ಪೇಜ್‌ನಲ್ಲೂ ಒಂದು ಟ್ವಿಸ್ಟ್” ಎಂಬ ಟ್ಯಾಗ್‌ಲೈನ್ ಗಮನ ಸೆಳೆಯುತ್ತಿದೆ.
ಯುವ ನಿರ್ದೇಶಕರ ಹೊಸ ಪ್ರಯೋಗ: ಈ ಸರಣಿಯ ಕಥೆ ಮತ್ತು ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿರುವವರು ಶ್ರೀನಿಧಿ ಬೆಂಗಳೂರು. ಅವರು ಈಗಾಗಲೇ ಬ್ಲಿಂಕ್ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಅದರ ಬಳಿಕ ಅವರು ದೀಕ್ಷಿತ್ ಶೆಟ್ಟಿ ಜೊತೆಗೂಡಿ “ವೀಡಿಯೋ” ಎಂಬ ಫೌಂಡ್ ಫೂಟೇಜ್ ಥ್ರಿಲ್ಲರ್ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಈ ಹಿನ್ನೆಲೆ “ಜೆರಾಕ್ಸ್” ಸರಣಿಯ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಡಾಲಿ ಧನಂಜಯ್ ಜೀವನದ ಪ್ರೇರಣೆ ಇದೆಯೇ? : ನಟ ಡಾಲಿ ಧನಂಜಯ್ ಅವರ ಕಾಲೇಜು ದಿನಗಳಲ್ಲಿ ಮೈಸೂರಿನಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡಿದ್ದದ್ದು ಸಾಕಷ್ಟು ಜನರಿಗೆ ಪರಿಚಿತ. ಹೀಗಾಗಿ, ಈ ಸರಣಿ ಅವರ ಜೀವನ ಕಥೆಯನ್ನು ಆಧರಿಸಿದ್ದೇ ಅಥವಾ ಸಂಪೂರ್ಣ ಕಲ್ಪಿತ ಕಥಾಹಂದರವೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಆದರೆ ಈ ಕುರಿತು ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.
ಜೀ ಕನ್ನಡದ ಜೊತೆಗಿನ ಸಂಪರ್ಕ: ಶ್ರೀನಿಧಿ ಬೆಂಗಳೂರು ಅವರು ಮಹಾನಟಿ ಸೀಸನ್ 2 ವಿಜೇತರಿಗಾಗಿ ಕಿರುಚಿತ್ರವನ್ನು ನಿರ್ದೇಶಿಸಿದ್ದು, “35mm” ಎಂಬ ಪಾಡ್‌ಕಾಸ್ಟ್ ಮೂಲಕವೂ ಕನ್ನಡ ಸಿನಿಮಾಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.























