ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಅವರ ಮುಂಬರುವ ಹೊಸ ಸಿನಿಮಾದ ಟೈಟಲ್ ‘ಮದರ್ ಪ್ರಾಮಿಸ್’ ಎಂದು ಘೋಷಣೆಯಾಗಿದ್ದು, ಇದರ ಹಿಂದಿರುವ ಇಂಟರೆಸ್ಟಿಂಗ್ ಕಥೆಯನ್ನು ಸ್ವತಃ ಡಾಲಿ ಬಿಚ್ಚಿಟ್ಟಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಈ ಚಿತ್ರದ ಕಥೆಗೂ ನಮ್ಮ ಹೆಮ್ಮೆಯ ಆರ್ಸಿಬಿ (RCB) ತಂಡಕ್ಕೂ ಬಿಡಿಸಲಾಗದ ನಂಟಿದೆ!
ಹೌದು, 2025ರಲ್ಲಿ ಆರ್ಸಿಬಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದ ಆ ಸಂಭ್ರಮದ ರಾತ್ರಿಯೇ ಈ ಸಿನಿಮಾದ ಎಳೆಯೊಂದು ಹುಟ್ಟಿತಂತೆ. ಆ ಕ್ಷಣದ ಅತೀವ ಖುಷಿ, ಕಣ್ಣೀರು ಹಾಗೂ ಹೈವೋಲ್ಟೇಜ್ ಎಮೋಷನ್ಗಳು ಧನಂಜಯ್ ಅವರ ಈ ಹೊಸ ಚಿತ್ರಕ್ಕೆ ಸ್ಫೂರ್ತಿಯಾಗಿವೆ. ಈ ವಿಶೇಷವಾದ ಭಾವನೆಗಳೇ ‘ಮದರ್ ಪ್ರಾಮಿಸ್’ ಎಂಬ ಕ್ಯಾಚಿ ಹಾಗೂ ಆಪ್ತವಾದ ಶೀರ್ಷಿಕೆ ಹುಟ್ಟಲು ಕಾರಣ ಎಂದು ಅವರು ಹೇಳಿದ್ದಾರೆ. “ಮದರ್ ಪ್ರಾಮಿಸ್” ಎಂಬುದು ಪ್ರತಿಯೊಬ್ಬ ಯುವಕನೂ ದಿನನಿತ್ಯ ಬಳಸುವ ಒಂದು ಸಾಮಾನ್ಯ ಪದವಾಗಿರುವುದರಿಂದ (Slang), ಇದು ಯುವಜನತೆಗೆ ಬೇಗನೆ ಕನೆಕ್ಟ್ ಆಗಲಿದೆ.
ಅಷ್ಟೇ ಅಲ್ಲದೆ, ಈ ಟೈಟಲ್ ಡಾಲಿ ಅವರ ಕಾಲೇಜು ದಿನಗಳತ್ತ ಮರಳಿ ಕರೆದೊಯ್ದಿದೆ. ಅಂದು ತಮ್ಮ ಆಪ್ತ ಸ್ನೇಹಿತರಾದ ನಾಗ, ಸುನಿಲ್ ಮತ್ತು ಮಹದೇವ ಜೊತೆಗೂಡಿ ಇದೇ ಹೆಸರಿನಲ್ಲಿ ತಮಾಷೆಯ ಶಾರ್ಟ್ ಫಿಲ್ಮ್ ಒಂದನ್ನು ಮಾಡಿದ್ದರಂತೆ. ಅಂದಿನ ಆ ತುಂಟಾಟದ ನೆನಪುಗಳು ಇಂದಿನ ಈ ದೊಡ್ಡ ಸಿನಿಮಾಗೆ ಭಾವನಾತ್ಮಕ ಬೆಸುಗೆಯಾಗಿದೆ. ಅಂದು ಶಾರ್ಟ್ ಫಿಲ್ಮ್ಗಳಿಂದ ಶುರುವಾದ ಡಾಲಿಯ ಬಣ್ಣದ ಪಯಣ, ಇಂದು ಕನ್ನಡಿಗರ ನೆಚ್ಚಿನ ನಟನಾಗಿ ಬೆಳೆದಿರುವುದು ಅವರ ಕಠಿಣ ಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನು ಚಿತ್ರದ ಮೊದಲ ಹಾಡಿಗೆ ನವನೀತ್ ಶ್ಯಾಮ್ ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದು, ಶಶಾಂಕ್ ಸೋಗಲ್ ಅವರ ಸಾಹಿತ್ಯವಿದೆ. ಈ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಪಕ್ಕಾ ಮಾಸ್ ಹಾಗೂ ಯೂತ್ಫುಲ್ ಆಗಿರಲಿದೆ ಎಂಬ ನಿರೀಕ್ಷೆಯಿದೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಸೀಸನ್ನಲ್ಲೂ ಆರ್ಸಿಬಿ ಅಬ್ಬರಿಸುತ್ತಿದ್ದು, “ಈ ಸಲನೂ ಕಪ್ ನಮ್ದೇ” ಎಂದು ಡಾಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ಗೆಲುವಿನಂತೆ, ಡಾಲಿ ಅವರ ಈ ಚಿತ್ರವೂ ಪ್ರೇಕ್ಷಕರ ಹೃದಯ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ.























