ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಮತ್ತು ಅವರ ಸಹಚರರ ನಡುವೆ ಒಡಕು ಮೂಡಿದೆ. ಮೂಲಗಳ ಪ್ರಕಾರ, ಸ್ವತಃ ದರ್ಶನ್ ಗ್ಯಾಂಗ್‌ನ ಕೆಲವು ಸದಸ್ಯರೇ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ನಟ ದರ್ಶನ್, ಪ್ರದೋಷ್, ಲಕ್ಷ್ಮಣ್, ಅನ್ಬುಕುಮಾರ್, ಜಗದೀಶ್, ನಾಗರಾಜ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ, ಅವರೆಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಪ್ರಸ್ತುತ, ದರ್ಶನ್ ಮತ್ತು ಅವರ ಸಹಚರರನ್ನು ಜೈಲಿನ ಒಂದೇ ಬ್ಯಾರಕ್‌ನಲ್ಲಿ ಇರಿಸಲಾಗಿದೆ.
ಮೊದಲ ಬಾರಿಗೆ ಬಂಧನವಾದಾಗ ದರ್ಶನ್‌ರನ್ನು ಬಳ್ಳಾರಿ ಜೈಲು ಸೇರಿದಂತೆ ಉಳಿದ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಲ್ಲಿ ಇರಿಸಲಾಗಿತ್ತು. ಆಡಳಿತಾತ್ಮಕ ಮತ್ತು ಭದ್ರತಾ ದೃಷ್ಟಿಯಿಂದ, ಗ್ಯಾಂಗ್‌ನ ಸದಸ್ಯರನ್ನು ಅವರ ಹಿಂದಿನ ಜೈಲುಗಳಿಗೆ ಶಿಫ್ಟ್ ಮಾಡಬೇಕು ಎಂದು ಸರ್ಕಾರಿ ವಕೀಲರು ಅರ್ಜಿ ಸಲ್ಲಿಸಿದ್ದರು.
ಆದರೆ, ಟ್ರಯಲ್ (ವಿಚಾರಣೆ) ದಿನಾಂಕ ನಿಗದಿಯಾಗಲಿರುವ ಕಾರಣ, ಪ್ರತಿ ಬಾರಿ ದರ್ಶನ್ ಮತ್ತು ಗ್ಯಾಂಗ್‌ನವರನ್ನು ಕರೆದುಕೊಂಡು ಬರಲು ಕಷ್ಟವಾಗುತ್ತದೆ. ಹೀಗಾಗಿ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಎಂದು ವಾದಿಸಲಾಯಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ದರ್ಶನ್ ಮತ್ತು ಗ್ಯಾಂಗ್ ಜೈಲಿಗೆ ಬಂದ ದಿನದಿಂದ ಯಾವುದೇ ದುರ್ವರ್ತನೆ ತೋರದ ಕಾರಣ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲು ನಿರಾಕರಿಸಿದರು.
ಕೋರ್ಟ್‌ನ ಈ ನಿಲುವೇ ದರ್ಶನ್ ಮತ್ತು ಗ್ಯಾಂಗ್ ನಡುವೆ ಒಡಕು ಮೂಡಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಬೇರೆ ಜೈಲಿಗೆ ಶಿಫ್ಟ್ ಆಗುವ ವಿಚಾರದಲ್ಲಿ ದರ್ಶನ್ ಅಡ್ಡಿಪಡಿಸಿದ್ದಾರೆ ಎಂದು ಗ್ಯಾಂಗ್‌ನ ಸದಸ್ಯರು ಮನಸ್ತಾಪ ಮಾಡಿಕೊಂಡಿದ್ದಾರಂತೆ.
ಕೊಳೆಯುವಂತೆ ಮಾಡಿದ್ದಾರೆ: ಚಿತ್ರದುರ್ಗದ ಆರೋಪಿಗಳಾದ ಅನ್ಬುಕುಮಾರ್ ಮತ್ತು ಜಗದೀಶ್ ಅಸಮಾಧಾನ ಹೊರ ಹಾಕಿದ್ದು, ದರ್ಶನ್ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಇಲ್ಲಿ ಕೊಳೆಯುವಂತೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರಂತೆ. ಬೇರೆ ಜೈಲಿಗೆ ಶಿಫ್ಟ್ ಮಾಡಿದ್ದರೆ ನಮ್ಮ ಪೋಷಕರಿಗೆ ಬಂದು ಹೋಗುವುದಕ್ಕೆ ಅನುಕೂಲವಾಗುತ್ತಿತ್ತು. ಇವರ ಅನುಕೂಲಕ್ಕೆ ಬೇರೆ ಜೈಲಿಗೆ ಹೋಗದಂತೆ ಮಾಡಿಕೊಂಡರು ಎಂದು ಉಳಿದ ಸದಸ್ಯರ ಬಳಿ ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

























