ದರ್ಶನ್ ಜೈಲಿಗೆ: ವಿಜಯಲಕ್ಷ್ಮಿ ದರ್ಶನ್ ಭಾವುಕ ಪೋಸ್ಟ್

0
143

ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿ ದರ್ಶನ್ ಸೇರಿದಂತೆ 6 ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು.

ಗುರುವಾರ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ನ್ಯಾಯಾಧೀಶರ ಆದೇಶದಂತೆ ಗುರುವಾರ ರಾತ್ರಿ ರೇಣಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಎ-1 ಪವಿತ್ರಾ ಗೌಡ, ಎ-2 ದರ್ಶನ್, ಎ-6 ಜಗದೀಶ್, ಎ-7 ಅನು ಕುಮಾರ್, ಎ-14 ಪ್ರದೋಶ್, ಎ-11 ನಾಗರಾಜು ನಾಗ, ಎ-12 ಲಕ್ಷ್ಮಣ್ ಪುನಃ ಜೈಲಿ ಪಾಲಾಗಿದ್ದಾರೆ.

ವಿಜಯಲಕ್ಷ್ಮಿ ಪೋಸ್ಟ್; ಗುರುವಾರ ಸಂಜೆ ಪೊಲೀಸರು ನಟ ದರ್ಶನ್‌ರನ್ನು ಪತ್ನಿ ವಿಜಯಲಕ್ಷ್ಮಿಯವರ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಿದ್ದರು. ದರ್ಶನ್ ಬಂಧನವಾದ ಬಳಿಕ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ವಿಜಯಲಕ್ಷ್ಮಿ ದರ್ಶನ್ ಶನಿವಾರ ಭಾವುಕ ಪೋಸ್ಟ್‌ವೊಂದನ್ನು ಹಾಕಿದ್ದಾರೆ.

ಶನಿವಾರ ವಿಜಯಲಕ್ಷ್ಮಿ ಇನ್‌ಸ್ಟಾ ಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದು, ದರ್ಶನ್ ಒಂಟಿಯಾಗಿ ನಿಂತಿರುವ ಫೋಟೋ ಹಾಕಿದ್ದಾರೆ. ಅಲ್ಲದೇ ಹೃದಯ ಚೂರಾಗಿರುವ ಇಮೇಜಿಯನ್ನು ಹಾಕಿದ್ದಾರೆ. ದರ್ಶನ್‌ರನ್ನು ಜೈಲಿನಿಂದ ಬಿಡುಗಡೆಗೊಳಿಸಲು ವಿಜಯಲಕ್ಷ್ಮಿ ಸಾಕಷ್ಟು ಶ್ರಮಪಟ್ಟಿದ್ದರು.

ಕರ್ನಾಟಕ ಹೈಕೋರ್ಟ್‌ ದರ್ಶನ್‌ಗೆ ಜಾಮೀನು ನೀಡಿತ್ತು. ಆದರೆ ಕರ್ನಾಟಕ ಸರ್ಕಾರ ಜಾಮೀನು ನೀಡಿರುವ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಜಾಮೀನು ರದ್ದುಗೊಳಿಸಿತ್ತು.

ಜಾಮೀನು ರದ್ದು ಮಾಡಿರುವ ಕೋರ್ಟ್ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಸದ್ಯದ ಮಾಹಿತಿ ಪ್ರಕಾರ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿರುವ ಕಾರಣ ದರ್ಶನ್‌ಗೆ ಸದ್ಯಕ್ಕೆ ಜೈಲುವಾಸವೇ ಗತಿಯಾಗಿದೆ. 6 ತಿಂಗಳ ಬಳಿಕ ಅವರು ಪುನಃ ಜಾಮೀನು ಪಡೆಯಲು ಸುಪ್ರೀಂಕೋರ್ಟ್ ಮೊರೆ ಹೋಗಬೇಕಿದೆ.

ಜಾಮೀನು ರದ್ದುಗೊಳಿಸುವಾಗ ಸುಪ್ರೀಂಕೋರ್ಟ್ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. ಆದ್ದರಿಂದ ಬೆಂಗಳೂರು ನಗರ ಪೊಲೀಸರು ತ್ವರಿತಗತಿ ಕೋರ್ಟ್ (fast track court) ಸ್ಥಾಪನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲು ತಯಾರಿ ನಡೆಸಿದ್ದಾರೆ.

ಒಂದು ವೇಳೆ ಗೃಹ ಇಲಾಖೆ ಒಪ್ಪಿಗೆ ನೀಡಿದರೆ fast track court ರಚನೆಯಾಗಲಿದೆ. ಈ ಕೋರ್ಟ್ ಪ್ರತಿದಿನ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಡೆಸಿ, ಆರು ತಿಂಗಳಿನಲ್ಲಿ ವಿಚಾರಣೆ ಪೂರ್ಣಗೊಳಿಸಲಿದೆ.

ಕೋರ್ಟ್ ಯಾವ ತೀರ್ಪನ್ನು ನೀಡಲಿದೆ? ಎಂಬುದರ ಮೇಲೆ ದರ್ಶನ್ ಭವಿಷ್ಯ ನಿರ್ಧಾರವಾಗಲಿದೆ. ರೇಣುಕಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಾಗಲೇ ಈ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು.

ಪೊಲೀಸರು ಸೋಮವಾರ fast track court ಗಾಗಿ ಕಾನೂನು ಇಲಾಖೆಗೆ ಮನವಿ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ. ಕರ್ನಾಟಕ ಸರ್ಕಾರವೇ ದರ್ಶನ್ ಜಾಮೀನು ರದ್ದುಗೊಳಿಸಿದ್ದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಆದ್ದರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ fast track court ರಚನೆ ಮಾಡಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ.

Previous articleನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ, ಮೆಜೆಸ್ಟಿಕ್‌ನಲ್ಲಿ ಜನ ಸಾಗರ!
Next articleಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು, ವಿಚ್ಛೇಧನಕ್ಕೆ ಅರ್ಜಿ

LEAVE A REPLY

Please enter your comment!
Please enter your name here