ಸಂಯುಕ್ತ ಕರ್ನಾಟಕ ಪತ್ರಿಕೆ ಮಂಗಳವಾರದ ಸಂಪಾದಕೀಯ
ರಾಜ್ಯದಲ್ಲಿ ಹಲವು ಕಂಪನಿಗಳ ಸಿಇಒ ಸೇರಿದಂತೆ ಒಟ್ಟು 12.68 ಲಕ್ಷ ಬೋಗಸ್ ಕಾರ್ಡ್ಗಳಿವೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಇವುಗಳನ್ನು ರದ್ದುಪಡಿಸಿ 13.5 ಕೋಟಿ ರೂ. ದಂಡ ವಸೂಲು ಮಾಡಲಾಗಿದೆ. ಆದರೆ ಒಬ್ಬರ ಮೇಲೂ ಕ್ರಿಮಿನಲ್ ಕಾನೂನು ಕ್ರಮ ಕೈಗೊಂಡಿಲ್ಲ ಎಂಬುದು ಆಶ್ಚರ್ಯದ ಸಂಗತಿ. ರಾಜ್ಯದಲ್ಲಿ ಎಷ್ಟು ಜನ ಕಡು ಬಡವರಿದ್ದಾರೆ ಎಂಬ ಅಂಕಿ-ಅಂಶಗಳ ವಿಚಾರದಲ್ಲಿ ನೀತಿ ಆಯೋಗಕ್ಕೂ ರಾಜ್ಯ ಸರ್ಕಾರ ಹಲವು ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಕಡು ಬಡವರನ್ನು ನಿರ್ಧರಿಸುವುದರ ಮಾನದಂಡಗಳು ಕೇಂದ್ರಕ್ಕೂ ರಾಜ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬಿಪಿಎಲ್ ಕಾರ್ಡ್ ಕೊಡುವುದು ರಾಜ್ಯದಲ್ಲಿ ರಾಜಕೀಯ ವಿಷಯ. ಒಬ್ಬ ಶಾಸಕನಿಗೆ ಹೆಚ್ಚು ಜನರಿಗೆ ಬಿಪಿಎಲ್ ಕಾರ್ಡ್ ಕೊಡಿಸುವುದು ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಹೊಸ ಶಾಸಕ ಬಂದ ಕೂಡಲೇ ಹೊಸ ಬಿಪಿಎಲ್ ಕಾರ್ಡ್ ಸೃಷ್ಟಿಯಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.
ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಬೋಗಸ್ ಕಾರ್ಡ್ ಇರುವುದು ಕಲಬುರ್ಗಿಯಲ್ಲಿ. ಜಿಲ್ಲಾಧಿಕಾರಿ ಆಹಾರ ವಿಭಾಗದ ಸೀಲ್ ಕೂಡ ಒಂದು ಕಾಲಕ್ಕೆ ಬೋಗಸ್ ಇತ್ತು. ಈಗ ಅಲ್ಲಿ 1.32 ಲಕ್ಷ ಬೋಗಸ್ ಕಾರ್ಡ್ 3.8 ಲಕ್ಷ ಫಲಾನುಭವಿಗಳು. ಬೆಂಗಳೂರು ನಗರದಲ್ಲಿ 1 ಲಕ್ಷ ಬೋಗಸ್ ಕಾರ್ಡ್. ಬೆಳಗಾವಿ, ಚಿತ್ರದುರ್ಗ, ಬೀದರ್‌ನಲ್ಲಿ ಜನಸಂಖ್ಯೆಗೆ ಹೋಲಿಸಿದಲ್ಲಿ ಬೋಗಸ್ ಕಾರ್ಡ್ ಹೆಚ್ಚಿನ ಸಂಖ್ಯೆಯಲ್ಲಿವೆ. ವಿವಿಧ ಕಂಪನಿಗಳ ಮುಖ್ಯಸ್ಥರ ಕೈಯಲ್ಲಿ 20 ಸಾವಿರ ಬೋಗಸ್ ಕಾರ್ಡ್ಗಳಿವೆ. ಇವುಗಳನ್ನು ನೀಡಿದ ಒಬ್ಬ ಅಧಿಕಾರಿಗೂ ಇದುವರೆಗೆ ಶಿಕ್ಷೆ ಆಗಿಲ್ಲ ಎಂದ ಮೇಲೆ ಇದು ನಿಲ್ಲುವುದಿಲ್ಲ ಎಂಬುದು ಸ್ಪಷ್ಟ. ಅದರಲ್ಲೂ ನಗರ ಪ್ರದೇಶದ ಜನರೇ ಹೆಚ್ಚು ಕಾರ್ಡ್‌ಗಳನ್ನು ಹೊಂದಿದ್ದಾರೆ.
ಬಡವರಿಗೆ ಸುಲಭವಾಗಿ ಸಿಗದ ಬಿಪಿಎಲ್ ಕಾರ್ಡ್ ಶ್ರೀಮಂತರ ಮನೆ ಬಾಗಿಲಿಗೆ ಹೋಗುತ್ತದೆ. ಇದು ಸರ್ಕಾರ ಜನರ ಮನೆ ಬಾಗಿಲಿಗೆ ಹೋಗುವ ರೀತಿ. ಬೋಗಸ್ ಕಾರ್ಡ್ ಹೊಂದಿದವರಿಗೆ ದಂಡ ವಿಧಿಸಿ ಅವರಿಗೆ ಎಪಿಎಲ್ ಕಾರ್ಡ್ ನೀಡುವ ಪದ್ಧತಿ ಇದೆ. ಸಿಕ್ಕಿಬಿದ್ದಾಗ ನೋಡಿಕೊಳ್ಳೋಣ ಎಂದು ಹೇಳುವವರೂ ಇದ್ದಾರೆ. 20 ಸಾವಿರ ಜನ ರೇಷನ್ ತೆಗೆದುಕೊಳ್ಳಲು ಅಂಗಡಿಗೆ ಹೋಗುತ್ತಿಲ್ಲ. ಆದರೆ ಕಾರ್ಡ್ ಬಳಕೆ ಬೇರೆ ಕಡೆ ಇದೆ. ಬಿಪಿಎಲ್ ಕಾರ್ಡ್ ಇದ್ದರೆ ಸರ್ಕಾರದ ಎಲ್ಲ ಸವಲತ್ತು ಪಡೆಯಬಹುದು. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅನುಕೂಲ.
ಇದೆಲ್ಲವನ್ನೂ ನೋಡಿದರೆ ಬೋಗಸ್ ಬ್ರಹ್ಮರಾಕ್ಷಸನ ಕಬಂಧ ಬಾಹುಗಳನ್ನು ಕಡಿಯುವುದು ಸುಲಭದ ಕೆಲಸವಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಎಲ್ಲ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಒಂದುಗೂಡಿ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೋಗಸ್ ಕಾರ್ಡ್ ರದ್ದತಿ ಆಂದೋಲನ ಕೈಗೊಂಡಲ್ಲಿ ಮಾತ್ರ ನಿಲ್ಲಬಹುದು. ಅಲ್ಲಿಯವರೆಗೆ ಬೋಗಸ್ ಕಾರ್ಡ್ ನಿವಾರಣೆ ಕಡತಗಳಲ್ಲಿ ಮಾತ್ರ ಉಳಿಯುತ್ತದೆ. ರೇಷನ್ ಕಾರ್ಡ್ ಹೊರತುಪಡಿಸಿ ಉಳಿದ ಸರ್ಕಾರಿ ಯೋಜನೆಗಳಿಗೆ ಇದು ಗುರುತಿನ ಚೀಟಿ ಅಲ್ಲ ಎಂದಾದರೆ ಬೋಗಸ್ ಕಾರ್ಡ್‌ಗಳು ತಂತಾನೇ ಇಲ್ಲವಾಗುತ್ತದೆ. ಕಡು ಬಡವನನ್ನು ಪ್ರತಿ ಯೋಜನೆಗೂ ಪ್ರತ್ಯೇಕವಾಗಿ ಗುರುತಿಸುವ ಕೆಲಸ ನಡೆದರೆ ಬಿಪಿಎಲ್ ಕಾರ್ಡ್ ರದ್ದಿಗೆ ಹೋಗುವುದಂತೂ ನಿಜ.
ನಮ್ಮಲ್ಲಿ ನಿಷ್ಠಾವಂತ ಅಧಿಕಾರಿಗಳು ಇಲ್ಲ ಎಂದರ್ಥವಲ್ಲ. ಅವರಿಗೆ ಮುಕ್ತ ಅವಕಾಶ ನೀಡಬೇಕು. ರಾಜಕೀಯ ಹಸ್ತಕ್ಷೇಪ ಇರಬಾರದು. ಆಗ ಆಹಾರ ಇಲಾಖೆ ಸ್ವಚ್ಛತೆ ಕಾರ್ಯ ಫಲಪ್ರದವಾಗುತ್ತದೆ. ಹಿಂದೆ ನಿಷ್ಠಾವಂತರು ಮಾಡಿ ತೋರಿಸಿದ್ದರು. ನಂತರ ಬಂದ ರಾಜಕಾರಣಿಗಳು ಅದನ್ನು ಹದಗೆಡಿಸಿದ್ದು ನಿಜ. ಇಂದಿನ ಕಂಪ್ಯೂಟರ್ ಯುಗದಲ್ಲಿ ಬೋಗಸ್ ಕಾರ್ಡ್ ಉಳಿದಿದೆ ಎಂದರೆ ಅದಕ್ಕೆ ನಾವೇ ಕಾರಣವೇ ಹೊರತು ಬೇರೆ ಯಾರೂ ಅಲ್ಲ. ನಮ್ಮ ಕಣ್ಣಮುಂದೆ ಇರುವ ಬೋಗಸ್ ಕಾರ್ಡ್‌ದಾರರನ್ನು ಕಂಡುಹಿಡಿಯುವುದು ಕಷ್ಟವೇ? ಇದೆಲ್ಲ ಕಣ್ಣೊರೆಸುವ ತಂತ್ರವಷ್ಟೆ.
ನಮ್ಮ ಸರ್ಕಾರಿ ವ್ಯವಸ್ಥೆಯಲ್ಲೇ ಬೋಗಸ್ ಕಾರ್ಡ್ ಪಡೆಯುವುದು ಸುಲಭ ಎಂದಾಗಿರುವಾಗ ನಿಜವಾದ ಬಡವರಿಗೆ ಮಾತ್ರ ಕೊಡುವುದಾಗಿ ಹೇಳುವುದು ವಾಸ್ತವಕ್ಕೆ ಅತಿ ದೂರ ಎಂಬುದರಲ್ಲಿ ಸಂದೇಹವಿಲ್ಲ. ಬಡವರಿಗೆ ಅಕ್ಕಿ ವಿತರಣೆಯಲ್ಲಿ ಕೇಂದ್ರ-ರಾಜ್ಯದ ನಡುವೆ ರಾಜಕೀಯ ಬಡಿದಾಟಗಳು ನಡೆಯಬಹುದೇ ಹೊರತು ಬೋಗಸ್ ಕಾರ್ಡ್ ವಿಷಯದಲ್ಲಿ ಯಾರೂ ದಿಟ್ಟ ನಿರ್ಧಾರ ಕೈಗೊಳ್ಳುವುದಿಲ್ಲ. ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಬೋಗಸ್ ಕಾರ್ಡ್ ಹಾಗೇ ಇರುತ್ತದೆ. ವ್ಯಕ್ತಿಗಳು ಬದಲಾಗಬಹುದು. ಭ್ರಷ್ಟ ವ್ಯವಸ್ಥೆ ಹಾಗೇ ಮುಂದುವರಿಯುತ್ತದೆ.