ಸಂಪಾದಕೀಯ: ರಾಜಧಾನಿಯಲ್ಲಿ ರಸ್ತೆಗುಂಡಿ; ಐಟಿ ಕಂಪನಿ ವಲಸೆ ಕೂಗು

0
1

ಸಂಯುಕ್ತ ಕರ್ನಾಟಕ ಪತ್ರಿಕೆ ಶುಕ್ರವಾರದ ಸಂಪಾದಕೀಯ

ಬೆಂಗಳೂರು ನಗರದಲ್ಲಿ ರಸ್ತೆಗಳ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಸಾರ್ವಜನಿಕರ ಕೂಗಿಗೆ ಕಿವಿಗೊಡದ ಸರ್ಕಾರ ಬಿಬಿಎಂಪಿಯನ್ನು 5 ಪಾಲಿಕೆಗಳಾಗಿ ವಿಂಗಡಿಸಿ ಗ್ರೇಟರ್ ಬೆಂಗಳೂರು ರಚನೆಯ ಸಂಭ್ರಮದಲ್ಲಿದೆ. ಈಗ ಮೊದಲ ಬಾರಿ ಐಟಿ ಕಂಪನಿಗಳು ರಸ್ತೆಗಳ ಪರಿಸ್ಥಿತಿ ಸುಧಾರಿಸದೇ ಇದ್ದಲ್ಲಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದಾಗಿ ಬೆದರಿಕೆ ಹಾಕಿವೆ.

ಇದರಿಂದ ಒಳ್ಳೆಯದೇ ಆಗಲಿದೆ. ಈಗ ಸರ್ಕಾರ ಸುಮ್ಮನೆ ಕೂಡಲು ಬರುವುದಿಲ್ಲ. ನೆರೆ ರಾಜ್ಯ ಆಂಧ್ರ ಸರ್ಕಾರ ಐಟಿ ಕಂಪನಿಗಳಿಗೆ ನಡೆಮುಡಿ ಹಾಸಿ ಕರೆಸಿಕೊಳ್ಳಲು ಸಿದ್ಧವಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ನಷ್ಟ ಕಟ್ಟಿಟ್ಟ ಬುತ್ತಿ. ಬೆಂಗಳೂರು ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳಿವೆ. 20 ಲಕ್ಷ ಜನ ಇಲ್ಲಿ ಕೆಲಸ ಮಾಡುತ್ತಾರೆ.

ಕರ್ನಾಟಕದ ಒಟ್ಟು ಜಿಡಿಪಿಯಲ್ಲಿ ಬೆಂಗಳೂರಿನ ಕೊಡುಗೆ ಶೇ. 43.65. ದೇಶದ ಒಟ್ಟು ಸಾಫ್ಟ್‌ವೇರ್ ರಫ್ತಿನಲ್ಲಿ ರಾಜ್ಯದ ಪಾಲು ಶೇ. 40. 1980ರಲ್ಲಿ ಬಂದ ಈ ಕಂಪನಿಗಳು ಈಗ 6.30 ಲಕ್ಷ ಕೋಟಿ ರೂ. ವ್ಯವಹಾರ ನಡೆಸುತ್ತಿವೆ. ಮಹದೇಪವುರ ಮತ್ತು ಬೆಂಗಳೂರು ದಕ್ಷಿಣ ಭಾಗದಲ್ಲಿ ಎಲ್ಲ ಸಾಫ್ಟ್‌ವೇರ್ ಕಂಪನಿಗಳು ಕೇಂದ್ರೀಕೃತಗೊಂಡಿವೆ. ಇವುಗಳು ಆಂಧ್ರಕ್ಕೆ ಸ್ಥಳಾಂತರಗೊಂಡಲ್ಲಿ ಬೆಂಗಳೂರಿನ ಆರ್ಥಿಕ ವ್ಯವಸ್ಥೆ ಕುಸಿಯುವುದಂತೂ ನಿಶ್ಚಿತ.

ಬೆಂಗಳೂರು ನಗರದಲ್ಲಿ 923 ಕಿಮೀ ರಸ್ತೆಗಳಿವೆ. ಇವುಗಳ ಗುಂಡಿ ಮುಚ್ಚಲು 12.25 ಕೋಟಿರೂ. ಬೇಕೆಂದು ಅಂದಾಜು ಮಾಡಲಾಗಿದೆ. ಒಂದು ಗುಂಡಿ ಮುಚ್ಚಲು 1185 ರೂ. ಬೇಕು. ರಸ್ತೆ ನಿರ್ಮಾಣ ಮತ್ತು ರಿಪೇರಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸರ್ಕಾರ ಕೊಡುವ ಹಣದಲ್ಲಿ ಶೇ. 20 ರಷ್ಟು ಡಾಂಬರ್‌ಗೆ ವೆಚ್ಚವಾಗುವುದಿಲ್ಲ.

ಅದರಿಂದ ರಸ್ತೆ ದುರಸ್ತಿಯಾದ ಕೆಲವು ತಿಂಗಳುಗಳಲ್ಲಿ ಗುಂಡಿಗಳನ್ನು ಮತ್ತೆ ನೋಡುವುದು ಸಾಮಾನ್ಯ ಸರ್ಕಾರ ಏನೇ ಕಾರಣ ನೀಡಿದರೂ ಜನ ನಂಬುವ ಸ್ಥಿತಿಯಲ್ಲಿಲ್ಲ. ನಗರದಲ್ಲೇ ಇರುವ ಸಚಿವರು, ಶಾಸಕರು ರಸ್ತೆಯ ದುಸ್ಥಿತಿಯ ಬಗ್ಗೆ ಚಕಾರ ಎತ್ತಿಲ್ಲ. ಜನ ಕೇಳಿದರೆ ಹಣವಿಲ್ಲ ಎನ್ನುತ್ತಾರೆ. ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನ, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನ. ರಸ್ತೆಗಳ ಪರಿಸ್ಥಿತಿ ನೋಡಿದರೆ ಬೆಂಗಳೂರಿನ ದುರವಸ್ಥೆ ತಿಳಿಯುತ್ತದೆ.

ರಸ್ತೆಗಳ ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಐಟಿ ಕಂಪನಿಗಳಿಗೆ ನೌಕರರು ಹೋಗಿ ಬರುವುದು ಕಷ್ಟವಾಗಿದೆ. ಅದರಲ್ಲೂ ಮಹದೇವಪುರ ವಲಯದಲ್ಲಿರುವ ಐಟಿ ಕಂಪನಿಗಳಿಗೆ ಬೇರೆ ಬಡಾವಣೆಯಿಂದ ಹೋಗಿ ಬರುವುದು ಎಂದರೆ ಹರಸಾಹಸ ಮಾಡಬೇಕು. ಕೊರೊನಾ ಕಾಲದಲ್ಲಿ ಆರಂಭಿಸಿದ ಮನೆಯಲ್ಲೇ ಕೆಲಸ ಮಾಡುವುದನ್ನು ಹಲವು ಕಂಪನಿಗಳು ಅನಿವಾರ್ಯವಾಗಿ ಮುಂದುವರಿಸಬೇಕಾದ ಪರಿಸ್ಥಿತಿ ಬಂದಿದೆ.

ಅದರಲ್ಲೂ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತಿವೆ. ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈಗ ಐಟಿ ಕಂಪನಿಗಳು ನೀಡಿರುವ ಎಚ್ಚರಿಕೆ ಸರ್ಕಾರವನ್ನು ಬಡಿದೆಬ್ಬಿಸಿದೆ. ಪಕ್ಕದ ಆಂಧ್ರದಲ್ಲಿ ಎಲ್ಲವೂ ಸಿದ್ಧವಾಗಿದೆ. ಒಮ್ಮೆ ಕಂಪನಿಗಳು ಸ್ಥಳಾಂತರಗೊಂಡಲ್ಲಿ ಮತ್ತೆ ಬೆಂಗಳೂರಿಗೆ ಬರುವುದು ಕನಸಿನ ಮಾತು. ವಿದೇಶಿ ಕಂಪನಿಗಳೊಂದಿಗೆ ಅಲ್ಲಿಯ ಸರ್ಕಾರ ಉತ್ತಮ ಸಂಬಂಧ ಸಾಧಿಸಿದೆ.

ನಮ್ಮಲ್ಲಿ ಸರ್ಕಾರ ರೈತರನ್ನು ಖುಷಿ ಪಡಿಸಲು ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳಲು ಹೊರಟು ಹಿಂದೆ ಸರಿದಿದೆ. ಇದರಿಂದ ಬಳ್ಳಾರಿಯಲ್ಲಿ ಬರಬೇಕಿದ್ದ ಬೃಹತ್ ಕೈಗಾರಿಕೆ ಆಂಧ್ರಕ್ಕೆ ಸ್ಥಳಾಂತರಗೊಂಡಿದೆ. ಕೃಷಿ ಮತ್ತು ಕೈಗಾರಿಕೆ ಪರಸ್ಪರ ಪೂರಕವಾಗಿರಬೇಕೆ ಹೊರತು ಪೈಪೋಟಿಗೆ ಬೀಳಬಾರದು. ಅದರಿಂದ ಇಡೀ ರಾಜ್ಯದ ಆರ್ಥಿಕ ಮಟ್ಟ ಕುಸಿಯುವುದರಲ್ಲಿ ಸಂದೇಹವಿಲ್ಲ.

ಬಂಜರು ಭೂಮಿ ಗುರುತಿಸಿ ಅವುಗಳನ್ನು ಕೈಗಾರಿಕೆಗಳಿಗೆ ನೀಡುವುದು ಅಗತ್ಯ. ಅದೇರೀತಿ ವಿಮಾನ ನಿಲ್ದಾಣ, ಬಂದರುಗಳ ಸಮೀಪ ಕೈಗಾರಿಕೆಗಳು ತಲೆ ಎತ್ತುವುದು ಸಹಜ. ಅವುಗಳ ಸಮೀಪ ಭೂಮಿ ಕೊಡುವುದಿಲ್ಲ ಎಂದರೆ ಉದ್ಯಮಿಗಳು ತಮಗೆ ಅನುಕೂಲಕರ ಸ್ಥಳಕ್ಕೆ ಹೋಗುತ್ತಾರೆ. ಈಗ ತಮಿಳುನಾಡು ಹೊಸೂರು ಬಳಿ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಹೊರಟಿರುವುದು ರಹಸ್ಯವಾಗೇನೂ ಉಳಿದಿಲ್ಲ.

ಆಗ ಬೆಂಗಳೂರಿನ ಕೆಲವು ಕಂಪನಿಗಳು ತಮ್ಮ ವ್ಯಾಪಾರ ವಹಿವಾಟನ್ನು ತಮಿಳುನಾಡಿಗೆ ಸ್ಥಳಾಂತರಿಸುವುದು ಸಹಜ. ಒಂದು ಕಡೆ ಆಂಧ್ರ ಮತ್ತೊಂದು ಕಡೆ ತಮಿಳುನಾಡು ಬೆಂಗಳೂರಿನ ವಾಣಜ್ಯ ವಹಿವಾಟಿಗೆ ಕೈಹಾಕಿದರೆ ಏನಾಗುತ್ತೆ ಎಂಬುದನ್ನು ರಾಜ್ಯ ಸರ್ಕಾರ ಚಿಂತಿಸಬೇಕು. ಭ್ರಷ್ಟಾಚಾರ ಕೆಲವರ ಜೇಬು ತುಂಬಬಹುದು. ಆದರೆ ಒಮ್ಮೆ ಕಳೆದು ಹೋದ ಆರ್ಥಿಕ ಚಟುವಟಿಕೆ ಮತ್ತೆ ಬರುವುದು ಕಷ್ಟ.

ಕೈಗಾರಿಕೆ ಅಭಿವೃದ್ಧಿ ವಿಚಾರದಲ್ಲಿ ಭಾಷೆ, ಜಲ, ಗಡಿ ವಿವಾದಗಳ ಉದ್ವೇಗದ ಮಾತುಗಳು ಕೆಲಸಕ್ಕೆ ಬರುವುದಿಲ್ಲ. ಬಂಡವಾಳ ಹೂಡಲು ಬರುವವರು ಅವುಗಳನ್ನು ನೋಡುವುದಿಲ್ಲ. ಅದಕ್ಕೆ ಬೇಕಾಗಿರುವುದು ವ್ಯವಹಾರಿಕ ಜ್ಞಾನವೇ ಹೊರತು ಮತ್ತೇನಲ್ಲ. ಆಂಧ್ರ ಮತ್ತು ತಮಿಳುನಾಡು ಸರ್ಕಾರ ಈ ವಿಷಯದಲ್ಲಿ ನಮಗಿಂತ ಮುಂದೆ ಇದೆ ಎಂಬುದಂತೂ ಸತ್ಯ.

Previous articleಬಾನು ಮುಷ್ತಾಕ್‌ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ: ಸುಪ್ರೀಂ ಕೋರ್ಟ್‌ನಲ್ಲೂ ವಜಾ
Next articleಚಡಚಣ ಎಸ್‌ಬಿಐ ದರೋಡೆ: ಪಾಳುಬಿದ್ದ ಮನೆಯಲ್ಲಿ 41 ಲಕ್ಷ ರೂ, 6.5 ಕೆಜಿ ಚಿನ್ನ ಪತ್ತೆ!

LEAVE A REPLY

Please enter your comment!
Please enter your name here