ಸಂಪಾದಕೀಯ: ಮತ್ತೆ ಮುನ್ನೆಲೆಗೆ ಜಾತಿ ಸಮೀಕ್ಷೆ, ಜೇನುಗೂಡಿಗೆ ಮತ್ತೊಂದು ಕಲ್ಲು

0
3

ಸಂಯುಕ್ತ ಕರ್ನಾಟಕ ಪತ್ರಿಕೆ ಬುಧವಾರದ ಸಂಪಾದಕೀಯ

ರಾಜ್ಯದಲ್ಲಿ ಇದುವರೆಗೆ ಹಲವು ಜಾತಿ ಸಮೀಕ್ಷೆಗಳು ಬಂದು ಹೋಗಿವೆ. ಮೈಸೂರು ಅರಸರು 1930 ರಚಿಸಿದ ವ್ಹೀಲರ್ ಸಮಿತಿಯಿಂದ ಹಿಡಿದು ಇತ್ತೀಚಿನ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿವರೆಗೆ ಹಲವು ವರದಿಗಳು ಪ್ರಕಟಗೊಂಡಿವೆ. ಯಾವುದನ್ನೂ ಜನ ಮನಃಪೂರ್ವಕವಾಗಿ ಒಪ್ಪಿಕೊಂಡಿಲ್ಲ. ಪ್ರತಿ ಬಾರಿ ವರದಿ ಪ್ರಕಟಗೊಂಡಾಗಲೂ ಅಸಮಾಧಾನ ಹೊಗೆ ಎದ್ದಿದೆಯೇ ಹೊರತು ಸಂತೃಪ್ತಿ ಕಂಡುಬಂದಿಲ್ಲ. ಇಂಥ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಮತ್ತೊಂದು ಜಾತಿ ಸಮೀಕ್ಷೆ ನಡೆಸಲು ಹೊರಟಿದೆ.

ಕಾನೂನು ರೀತ್ಯ ಕೇಂದ್ರ ಸರ್ಕಾರ ಮಾತ್ರ ಸಮೀಕ್ಷೆ ನಡೆಸಬಹುದು. ಆದರೆ ರಾಜ್ಯ ಸರ್ಕಾರಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳನ್ನು ನಡೆಸಬಹುದು. ಒಂದು ಕಡೆ ಜಾತಿ ವ್ಯವಸ್ಥೆ ಹೋಗಬೇಕು ಎನ್ನುತ್ತೇವೆ. ಮತ್ತೊಂದು ಕಡೆ ಜಾತಿ ಸಮೀಕ್ಷೆ ನಡೆಸುತ್ತೇವೆ. ಎರಡೂ ನಮಗೆ ಅಗತ್ಯ ಎನಿಸಿದೆ. ಜಾತಿ ವ್ಯವಸ್ಥೆ ಕಾಲಕ್ರಮೇಣ ಕಡಿಮೆಯಾಗಿರುವುದಂತೂ ನಿಜ. ಈಗ ಅಂತರ್‌ಜಾತಿ ವಿವಾಹಗಳು ಅಧಿಕಗೊಂಡಿವೆ.

ಹೊಟೇಲ್ ಮತ್ತಿತರ ಸಾರ್ವಜನಿಕ ಸ್ಥಳಗಳು ಅಧಿಕಗೊಂಡ ಮೇಲೆ ಊಟದಲ್ಲಿ ಜಾತಿ ವ್ಯವಸ್ಥೆ ಉಳಿದುಕೊಂಡಿಲ್ಲ. ಸಸ್ಯಾಹಾರಿ, ಮಾಂಸಾಹಾರಿ ಎರಡೇ ಉಳಿದುಕೊಂಡಿದೆ. ಎರಡೂ ಆಹಾರ ಪದ್ಧತಿ ಒಟ್ಟಿಗೆ ಇರುವ ಹೊಟೇಲ್‌ಗಳು ಬಂದಿವೆ. ಇನ್ನು ಸರ್ಕಾರಿ ಸವಲತ್ತು ಇರುವ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ನೌಕರಿಗೆ ಮಾತ್ರ ಜಾತಿ ಬೇಕಿದೆ. ಖಾಸಗಿ ರಂಗದಲ್ಲಿ ಇದಕ್ಕೆ ಅವಕಾಶವಿಲ್ಲ.

ಇನ್ನು ಪ್ರಧಾನವಾಗಿ ಬೇಕಿರುವುದು ರಾಜಕೀಯ ಅಧಿಕಾರಕ್ಕೆ. ಅಲ್ಲಿ ಬಹುಸಂಖ್ಯೆಯ ಜಾತಿ ಹೆಚ್ಚಿನ ಸ್ಥಾನ ಸಿಗಬೇಕೆಂಬ ಧೋರಣೆ ಇನ್ನೂ ಮುಂದುವರಿದಿದೆ. ಹೆಚ್ಚಿನ ಬಲ ಇರುವ ಜಾತಿಯ ಅಥವಾ ಜಾತಿಗಳ ಗುಂಪಿಗೆ ಸರ್ಕಾರದ ಮೇಲೆ ಹಿಡಿತ ಇರಬೇಕೆಂಬ ಇರಾದೆ ಈಗಲೂ ಉಳಿದುಕೊಂಡಿದೆ. ಇದಕ್ಕಾಗಿ ಈಗ ಜಾತಿ ಸಮೀಕ್ಷೆ ನಡೆಯುತ್ತಿದೆ. ಅಂದರೆ ರಾಜಕಾರಣಿಗಳಿಗೆ ಮತ್ತು ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಇದು ಬೇಕು ಎಂಬುದು ಸ್ಪಷ್ಟ.

ಎಲ್ಲಕ್ಕಿಂತ ಹೆಚ್ಚಾಗಿ ಅದಕ್ಷರು ಮತ್ತು ಭ್ರಷ್ಟರಿಗೆ ಜಾತಿ ದೊಡ್ಡ ಆಶ್ರಯ ತಾಣ. ಬಡವರು ಜೀವನೋಪಾಯಕ್ಕೆ ಜಾತಿ ವ್ಯವಸ್ಥೆಯನ್ನು ಆಶ್ರಯಿಸುತ್ತಾರೆ. ಉಳಿದವರಿಗೆ ಇದು ಬೇಕಿಲ್ಲ. ಬಹುತೇಕ ಜನ ಸರ್ಕಾರದ ತೀರ್ಮಾನದ ವಿರುದ್ಧ ಹೋಗಲು ಬಯಸುವುದಿಲ್ಲ. ಹೀಗಾಗಿ ಜಾತಿ ಸಮೀಕ್ಷೆ ನಡೆಯುತ್ತದೆ. ಈಗ ಹೊಸ ಅಲೆ ಎದ್ದಿದೆ. ಅದರಂತೆ ಎಲ್ಲ ಜಾತಿಗಳು ತಮ್ಮ ತಮ್ಮ ಜನರಿಗೆ ಉಪಜಾತಿ ಹೆಸರನ್ನು ಬರೆಸಬೇಡಿ ಎಂದು ಬಹಿರಂಗವಾಗಿ ಸೂಚನೆ ನೀಡುತ್ತಿದೆ.

ಇದು ಮೂಲ ಉದ್ದೇಶ ರಾಜಕೀಯ ಅಧಿಕಾರ ಪಡೆಯುವುದು. ಇದು ನಿಜವಾಗಿಯೂ ಉಪಜಾತಿಯನ್ನು ಇಲ್ಲದಂತೆ ಮಾಡುತ್ತದೆಯೇ ಎಂದರೆ ಖಂಡಿತ ಇಲ್ಲ. ಸಮೀಕ್ಷೆಯಲ್ಲಿ ಮಾತ್ರ ಅದು ಇರುವುದಿಲ್ಲ. ನಿಜ ಜೀವನದಲ್ಲಿ ಮುಂದುವರಿಯುತ್ತದೆ. ಅಲ್ಲದೆ ಜಾತಿಯಲ್ಲಿ ಆರ್ಥಿಕವಾಗಿ ಮುಂದುವರಿದವರು ಸಮೀಕ್ಷೆಯಲ್ಲಿ ಮಾತ್ರ ಸೇರುತ್ತಾರೆಯೇ ಹೊರತು ನಿಜ ಜೀವನದಲ್ಲಿ ಬೇರೆಯಾಗೇ ಉಳಿಯುತ್ತಾರೆ.

ಅದೇರೀತಿ ಒಂದು ಜಾತಿಯಲ್ಲಿ ನಿಜವಾಗಿಯೂ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರಿದವರು ನಮಗೆ ಮೀಸಲಾತಿ ಬೇಡ. ನಮ್ಮ ಜಾತಿಯಲ್ಲಿ ಹಿಂದುಳಿದವರಿಗೆ ಸಿಗಲಿ ಎಂದು ಸ್ವಯಂಪ್ರೇರಣೆಯಿಂದ ಹೇಳುವುದಿಲ್ಲ. ಆ ರೀತಿ ಹೇಳುವ ಹಾಗಿದ್ದರೆ ರಾಜ್ಯ ಸರ್ಕಾರ ಕೊಡುತ್ತಿರುವ ಉಚಿತ ಗ್ಯಾರಂಟಿ ಯೋಜನೆಗಳಿಗೆ ಜನ ಕಡಿಮೆಯಾಗಬೇಕಿತ್ತು. ಅದೇರೀತಿ ಬೋಗಸ್ ಬಿಪಿಎಲ್ ಕಾರ್ಡ್ ಇರುತ್ತಿರಲಿಲ್ಲ.

ಈಗ ಜಾತಿ ಸಮೀಕ್ಷೆಯ ಪರಿಸ್ಥಿತಿಯೂ ಇದೆ. ಹೇಗಾದರೂ ಮಾಡಿ ಸರ್ಕಾರಿ ಸವಲತ್ತು ಪಡೆಯಬೇಕೆಂದು ಬಯಸುವವರೇ ಹೆಚ್ಚು. ಹೀಗಾಗಿ ಜಾತಿ ಸಮೀಕ್ಷೆಗೆ ಮಹತ್ವ ಬಂದಿದೆ. ಇದು ಕೊನೆ ಇಲ್ಲದ ಯಾತ್ರೆ. ಒಂದು ಜಾತಿ ಸಮೀಕ್ಷೆಯ ವರದಿ ಪ್ರಕಟಗೊಳ್ಳುತ್ತಿದ್ದಂತೆ ಕೆಲವು ಜಾತಿಯ ಜನ ಅತೃಪ್ತಗೊಂಡು ಮತ್ತೊಂದು ಜಾತಿ ಸಮೀಕ್ಷೆಗೆ ಒತ್ತಾಯಿಸುತ್ತಾರೆ. ಅವರ ಧ್ವನಿ ಪ್ರಬಲಗೊಂಡಂತೆ ಮತ್ತೊಂದು ವರದಿ ಬರುತ್ತದೆ. ಇದು ನಿರಂತರ ಪ್ರಕ್ರಿಯೆ.

ಇದರ ನಡುವೆ ಮೀಸಲಾತಿ ಶೇ. 50 ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ಕಾರಗಳು ಶೇ. 85ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತಿವೆ. ಇನ್ನೂ ಸುಪ್ರೀಂ ಕೋರ್ಟ್ ಮನಸ್ಸು ಮಾಡಿಲ್ಲ. ಜಾತಿಯ ವಿಷಚಕ್ರದಿಂದ ಸರ್ಕಾರಿ ವ್ಯವಸ್ಥೆ ಹೊರಬರುವುದು ಕಷ್ಟ. ಖಾಸಗಿ ರಂಗದಲ್ಲಿ ಇವುಗಳ ಸಂಕೋಲೆಗಳಿಲ್ಲದೆ ಬೆಳೆಯಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ-ಖಾಸಗಿ ಎರಡೇ ಜಾತಿ ವರ್ಗಗಳಾಗಿ ಉಳಿದು ಬಿಡುವ ಭಯವೂ ಇದೆ.

ಹಿಂದುಳಿದವರ್ಗಕ್ಕೆ ಧ್ವನಿ ಕೊಟ್ಟ ದೇವರಾಜ ಅರಸು ಕೂಡ ಜಾತಿ ಸಂಘರ್ಷಕ್ಕಿಂತ ವರ್ಗ ಸಂಘರ್ಷ ಮುಖ್ಯ ಎಂದಿದ್ದರು. ನಾವು ಇನ್ನೂ ಜಾತಿ ಸಂಘರ್ಷದಲ್ಲೇ ಇದ್ದೇವೆ. ವರ್ಗ ಸಂಘರ್ಷ ನಡೆದಾಗ ಮಾತ್ರ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಕಾಣಬಹುದು. ಸಮಾಜದ ಸುದೈವ ಕೆಲವರು ಜಾತಿಸಂಘರ್ಷ ಮೀರಿ ಬೆಳೆದರು. ಅವರಿಂದ ಜನರಿಗೆ ಅನುಕೂಲವಾಯಿತು.

ಲಾಲ್ ಬಹುದ್ದೂರ್ ಶಾಸ್ತ್ರಿ, ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ, ಜೆಪಿ, ಕೃಪಲಾನಿ, ಅಂಬೇಡ್ಕರ್, ಸರ್ದಾರ್ ಪಟೇಲ್ ಜಾತಿ ವ್ಯವಸ್ಥೆ ಮೀರಿ ನಿಂತವರು. ನಮ್ಮ ಯುವ ಪೀಳಿಗೆಗೆ ಇವರು ಇಂದಿಗೂ ಆದರ್ಶರು ಎಂಬುದರಲ್ಲಿ ಸಂದೇಹವಿಲ್ಲ.

Previous articleಧರ್ಮಸ್ಥಳ: ಬಂಗ್ಲೆಗುಡ್ಡೆಯಲ್ಲಿ ಆರಂಭವಾಗದ ಅವಶೇಷ ಹುಡುಕುವ ಕಾರ್ಯ
Next articleಬೆಂಗಳೂರು: ರೋಲ್ಸ್ ರಾಯ್ಸ್ GCC ಉದ್ಘಾಟಿಸಿದ ಸಚಿವ ಎಂ ಬಿ ಪಾಟೀಲ

LEAVE A REPLY

Please enter your comment!
Please enter your name here