ಸರ್ಕಾರಿ ವರ್ಗಾವಣೆಗೆ ಪೂರ್ಣ ವಿರಾಮ ಅಗತ್ಯ. ಬರಗಾಲದ ಕಾರ್ಯಕ್ರಮಗಳು ನಡೆಯಬೇಕಿರುವುದರಿಂದ ಅದರತ್ತ ಸರ್ಕಾರ ಗಮನ ಹರಿಸುವುದು ಅಗತ್ಯ,
ರಾಜ್ಯ ಸರ್ಕಾರ ಬಂದ ಕೂಡಲೇ ಮಾಡಿದ್ದು ಎರಡೇ ಕೆಲಸ. ೫ ಗ್ಯಾರಂಟಿಗಳಿಗೆ ಚಾಲನೆ ಮತ್ತು ಸರ್ಕಾರಿ ನೌಕರರ ಸಾಮೂಹಿಕ ವರ್ಗಾವಣೆ. ಇದು ದೊಡ್ಡ ದಂಧೆಯಾಗಿದೆ ಎಂದು ಪ್ರತಿಪಕ್ಷದವರು ಆರೋಪಿಸಿದ ಮೇಲೆ ಅದು ಇಳಿಮುಖಗೊಂಡಿತು. ಶಾಸಕರ ಅಸಮಾಧಾನಕ್ಕೆ ಇದೂ ಪ್ರಮುಖ ಕಾರಣ. ಶಾಸಕರು ಹೇಳಿದ ಅಧಿಕಾರಿಗಳ ವರ್ಗಾವಣೆ ಆಗುತ್ತಿಲ್ಲ.
ಕೆಲವು ಸಚಿವರಂತೂ ಶಾಸಕರ ಕಡೆ ತಿರುಗಿಯೂ ನೋಡುತ್ತಿಲ್ಲ ಎಂಬ ಕೂಗು ಕೇಳಿ ಬಂದಿತ್ತು. ಆ ಮೇಲೆ ಮುಖ್ಯಮಂತ್ರಿ ಶಾಸಕರನ್ನು ಭೇಟಿಯಾಗಿ ಸಮಾಧಾನಪಡಿಸುವ ಕೆಲಸ ಕೈಗೊಂಡರು. ಆದರೂ ಎಲ್ಲ ಶಾಸಕರ ಕೋಪ ಶಮನಗೊಂಡಿಲ್ಲ. ಆಡಳಿತ ಪಕ್ಷಕ್ಕೆ ಸರ್ಕಾರಿ ನೌಕರರ ವರ್ಗಾವಣೆ ಒಂದು ರೀತಿಯಲ್ಲಿ ಹುಲುಸಾದ ಬೆಳೆ. ಇದಕ್ಕೆ ಮಳೆ ಏನೂ ಬೇಡ.
ರಾಜ್ಯದಲ್ಲಿ ೫ ಲಕ್ಷ ಸರ್ಕಾರಿ ನೌಕರರಿದ್ದಾರೆ. ಇವರಲ್ಲಿ ಶೇಕಡ ೬ ರಷ್ಟು ಜನರನ್ನು ವರ್ಗಾವಣೆ ಮಾಡಲು ಸಚಿವರಿಗೆ ಸರ್ಕಾರ ಅನುಮತಿ ನೀಡಿತ್ತು. ಅಂದರೆ ೩ ಲಕ್ಷ ಜನರ ವರ್ಗಾವಣೆ. ಇದಕ್ಕಿಂತ ಉತ್ತಮ ವ್ಯಾಪಾರ ಮತ್ತೊಂದಿಲ್ಲ. ಅದರಲ್ಲೂ ಮಧ್ಯವರ್ತಿಗಳ ಸಿಂಡಿಕೇಟ್‌ಗಳೇ ಹೆಚ್ಚು. ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸಚಿವರ ಕಾರ್ಯಾಲಯಗಳಲ್ಲಿ ೨೪ ಗಂಟೆಗಳು ನಿರಂತರ ನಡೆಯುತ್ತಿದ್ದ ಕೆಲಸ ಎಂದರೆ ಇದೊಂದೇ. ಕೆಲವು ಸಚಿವರು ಇವುಗಳನ್ನು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಕಾರ್ಯಾಲಯಕ್ಕೆ ಒಪ್ಪಿಸಿದ್ದುಂಟು. ಪೊಲೀಸ್, ಕಂದಾಯ, ಶಿಕ್ಷಣ, ವಾಣಿಜ್ಯ ತೆರಿಗೆ ಮತ್ತು ಸಾರಿಗೆ ಇಲಾಖೆಗಳು ಪ್ರಮುಖ. ವರ್ಗಾವಣೆ ಎಂದ ಮೇಲೆ ಅದರಲ್ಲಿ ಹಣ ಮತ್ತು ಜಾತಿ ಪ್ರಧಾನ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರಿ ನೌಕರರು ಇವೆರಡರ ಪ್ರಭಾವವಿಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ಬಂದು ತಲುಪಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಇದು ಕಡಿಮೆಯಾಗುವ ಸಂಭವವೂ ಇಲ್ಲ.
ಹೊಸ ಸರ್ಕಾರ ಬಂತು ಎಂದ ಕೂಡಲೇ ಪ್ರತಿಯೊಬ್ಬ ಶಾಸಕರು ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಕ್ಷೇತ್ರಕ್ಕೆ ಹಾಕಿಸಿಕೊಳ್ಳುವುದು ಇತ್ತೀಚೆಗೆ ಅಧಿಕಗೊಂಡಿದೆ. ಇದರಿಂದ ಒಳಿತು ಕೆಡಕು ಎರಡೂ ಆಗಿದೆ. ಶಾಸಕರು ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಸಾಗಲು ಅನುಕೂಲವಾಗುತ್ತದೆ. ಅದೇ ರೀತಿ ತಮಗೆ ಬೇಕಾದ ಅಧಿಕಾರಿಗಳನ್ನು ಕರೆಸಿಕೊಂಡರೆ ಆತ ತಪ್ಪು ಮಾಡಿದರೂ ಶಾಸಕ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಅದರಲ್ಲೂ ಲಂಚ ಪಡೆದ ಶಾಸಕ ಅಧಿಕಾರಿಗಳ ಕೈಗೊಂಬೆಯಾಗುವುದು ನಿಶ್ಚಿತ. ಹಿಂದೆ ಕೊರೊನಾ ಅನಾಹುತಗಳು ನಡೆದರೂ ಶಾಸಕರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೇ ಇರುವುದಕ್ಕೆ ಭ್ರಷ್ಟಾಚಾರವೇ ಕಾರಣ. ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಸಾರ್ವಜನಿಕ ಹಿತ ಇರಬೇಕು. ಆದರೆ ಬಹುತೇಕ ವರ್ಗಾವಣೆಯಲ್ಲಿ ಇದು ಇರುವುದೇ ಇಲ್ಲ.
ಐಎಎಸ್ ಅಧಿಕಾರಿಗಳು ವರ್ಗಾವಣೆಗೆ ಹೆದರುವುದಿಲ್ಲ. ಅವರಿಗೆ ಎಲ್ಲ ಕಡೆ ಉತ್ತಮ ಸವಲತ್ತು ಲಭಿಸುವುದರಿಂದ ಅವರು ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧವಿರುತ್ತಾರೆ. ಉಳಿದವರಿಗೆ ವರ್ಗಾವಣೆ ಒಂದು ಶಿಕ್ಷೆ. ಇಂಥ ವಿಷಚಕ್ರದಲ್ಲಿ ಸರ್ಕಾರಿ ನೌಕರರು ಪ್ರಾಮಾಣಿಕರಾಗಿರಬೇಕೆಂದು ಬಯಸುವುದು ಮೂರ್ಖತನ. ಭಾರತೀಯ ವಾಯುಪಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವರ್ಗಾವಣೆ ನಡೆಯುತ್ತದೆ. ಒಂದೂ ವರ್ಗಾವಣೆ ಬದಲಾಗುವುದಿಲ್ಲ. ವರ್ಷದಲ್ಲಿ ಒಮ್ಮೆ ಮಾತ್ರ ವರ್ಗಾವಣೆ. ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಅನುಸರಿಸಿದರೆ ಜಾತಿ ಮತ್ತು ಹಣದ ಪ್ರಭಾವ ಇಲ್ಲದಂತೆ ಮಾಡಬಹುದು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು.