ದೆಹಲಿ ನಗರದಲ್ಲಿ ಕೂಡಲೇ ಶುದ್ಧ ಪರಿಸರಕ್ಕೆ ಆಧುನಿಕ ಕ್ರಮಗಳನ್ನು ಕೈಗೊಳ್ಳಬೇಕು. ವಿದೇಶಿ ಪ್ರಮುಖ ನಗರಗಳಲ್ಲಿ ಬಳಕೆಯಾಗುತ್ತಿರುವ ಪರಿಸರ ರಕ್ಷಣೆ ತಂತ್ರಜ್ಞಾನ ನಮ್ಮಲ್ಲೂ ಬರಬೇಕು. ಇದು ಇಂದಿನ ತುರ್ತು ಕ್ರಮ. ಬೇರೆ ನಗರಗಳಲ್ಲಿ ಈ ಸಮಸ್ಯೆ ಬಾರದಂತೆ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು.
ದೆಹಲಿ ಈಗ ಮಾದರಿ ನಗರವಾಗಿ ಉಳಿದಿಲ್ಲ. ಹಿಂದೆ ವಿಶಾಲವಾದ ರಸ್ತೆಗಳು, ಸುತ್ತಲೂ ಹಚ್ಚಹಸಿರ ಹೊದಿಕೆ ಇತ್ತು. ಈಗ ಎಲ್ಲವೂ ಹೋಗಿ ಜನ ಉಸಿರಾಡಲೂ ಕಷ್ಟವಾಗಿದೆ. ಗಾಳಿ ಎಷ್ಟು ಹದಗೆಟ್ಟಿದೆ ಎಂದರೆ ಶಾಲೆಗಳಿಗೆ ರಜೆ ನೀಡಲಾಗಿದೆ. ಸರ್ಕಾರಿ ಕಚೇರಿಗಳಿಗೆ ರಜೆ ನೀಡಿ ಮನೆಯಿಂದಲೇ ಕೆಲಸ ಮಾಡಲು ಹೇಳಲಾಗಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಹವಾಮಾನ ರಕ್ಷಣೆಗೆ ಬೇಕಾದ ಆಧುನಿಕ ಕ್ರಮಗಳನ್ನು ಕೈಗೊ೦ಡಿಲ್ಲ. ವಿದೇಶಗಳಲ್ಲಿ ಹಲವು ಪ್ರಮುಖ ನಗರಗಳಲ್ಲಿ ಹವಾಮಾನ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ದುಬಾಯ್ ನಗರ ಸಮುದ್ರದ ತೀರದಲ್ಲಿದ್ದರೂ ಯಾರೂ ಬೆವರುವುದಿಲ್ಲ. ಗಾಳಿಯಲ್ಲಿ ಉಪ್ಪಿನ ಅಂಶ ಅಧಿಕಗೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗಳೆಲ್ಲ ಅತ್ಯಂತ ಸ್ವಚ್ಛ. ಧೂಳು ಎಂಬುದೇ ಇಲ್ಲ. ಅಲ್ಲದೆ ಅಲ್ಲಿಯ ಜನಸಂಖ್ಯೆಗೆ ಎರಡು ಪಟ್ಟು ವಾಹನಗಳಿದ್ದರೂ ಸಂಚಾರ ಸಮಸ್ಯೆ ಆಗುವುದೇ ಇಲ್ಲ. ಉತ್ತಮ ಗುಣಮಟ್ಟದ ಪೆಟ್ರೋಲ್ ಬಳಸುವುದರಿಂದ ಹೊಗೆ ಇರುವುದಿಲ್ಲ. ಮೋಟಾರು ವಾಹನಗಳು ಸಂಚಾರಿ ನಿಯಮ ಮೀರುವಂತಿಲ್ಲ.. ಈ ರೀತಿ ದೆಹಲಿಯಲ್ಲಿ ಕ್ರಮ ಕೈಗೊಳ್ಳುವ ತುರ್ತು ಅಗತ್ಯವಿದೆ. ಇದಕ್ಕೆ ಬಂಡವಾಳ ಹೂಡಿಕೆ ಹೆಚ್ಚು ಬೇಕಾಗಬಹುದು. ಕಟ್ಟುನಿಟ್ಟಿನ ಕ್ರಮಗಳಂತೂ ಅಗತ್ಯ. ದೆಹಲಿಯ ವಾತಾವರಣ ಹದಗೆಡುವುದಕ್ಕೆ ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತದ ಕೂಳೆಯನ್ನು ಸುಡುವುದೂ ಒಂದು ಕಾರಣ. ಅದರಿಂದ ಬರುವ ಹೊಗೆ ದೆಹಲಿ ನಗರವನ್ನು ಆವರಿಸುತ್ತಿದೆ. ಇದನ್ನು ತಡೆಗಟ್ಟಲು ಎಲ್ಲ ರೀತಿಯ ಪ್ರಯತ್ನಗಳನ್ನು ದೆಹಲಿ ಸರ್ಕಾರ ಕೈಗೊಂಡಿದೆ. ಆದರೂ ಕೂಳೆ ಸುಡುವುದನ್ನು ತಡೆಗಟ್ಟುವುದು ಅಗತ್ಯ. ಈಗ ಖಾಸಗಿ ವಾಹನಗಳ ಬಳಕೆಗೆ ಕಡಿವಾಣ ಹಾಕಿದೆ. ಮಹಿಳೆಯರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಬಳಕೆಗೆ ಸಮ ಮತ್ತು ಬೆಸ ಸಂಖ್ಯೆಯ ನಿರ್ಬಂಧ ವಿಧಿಸಲಾಗಿದೆ. ಮನೆ ಹಾಗೂ ಕಚೇರಿಗಳಲ್ಲಿ ಹವಾನಿಯಂತ್ರಣ ಬಳಸುವ ಬದಲು ಫ್ಯಾನ್ ಬಳಕೆಗೆ ಜಾಗೃತಿ ಮೂಡಿಸಲಾಗುತ್ತಿದೆ. ದೆಹಲಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿಗಳು, ನ್ಯಾಯಾಂಗ, ಸಂಸತ್ತು ಸೇರಿದಂತೆ ಎಲ್ಲ ಪ್ರಮುಖ ಅಂಗಗಳ ಕಚೇರಿಗಳು ಇರುವುದರಿಂದ ವಾಹನಗಳ ಬಳಕೆ ಕಡಿಮೆ ಮಾಡುವುದು ಕಷ್ಟವಾಗಿದೆ. ಕೇಂದ್ರ ಸರ್ಕಾರ ತನ್ನ ಕಚೇರಿಗಳನ್ನು ವಿಕೇಂದ್ರೀಕರಣಗೊಳಿಸಿದರೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಬಹುದು. ದೆಹಲಿ ಈಗ ಮಾದರಿನಗರವಾಗಿ ಉಳಿದಿಲ್ಲ. ಬೆಂಗಳೂರು ನಗರ ೧೧೦ ಲಕ್ಷ ವಾಹನಗಳನ್ನು ಹೊಂದಿದೆ. ಪ್ರತಿ ಚ.ಕಿಮೀ ಜನಸಂಖ್ಯೆಯನ್ನು ಪರಿಗಣಿಸಿದರೆ ದೆಹಲಿಗೂ ಬೆಂಗಳೂರಿಗೂ ವ್ಯತ್ಯಾಸ ಏನೂ ಕಂಡು ಬರುವುದಿಲ್ಲ. ಹಿಂದೆ ಹಸಿರು ವಲಯ ಎರಡೂ ನಗರಗಳಲ್ಲಿ ಅಧಿಕವಾಗಿತ್ತು.ಬೆಂಗಳೂರಿಗೆ ಮೆಟ್ರೋ ಬಂದ ಮೇಲೆ ಮರಗಿಡಗಳನ್ನು ಕಡಿಯುವುದು ಅಧಿಕಗೊಂಡಿತು. ಬೆಂಗಳೂರಿನಲ್ಲಿ ಜನಸಂದಣಿ ಕಡಿಮೆ ಮಾಡಬೇಕು ಎಂದರೆ ಮೈಸೂರು, ದಾವಣಗೆರೆ,ಶಿವಮೊಗ್ಗ ಸೇರಿದಂತೆ ಪ್ರಮಖ ನಗರಗಳಲ್ಲಿ ಮೂಲಭೂತ ಸವಲತ್ತುಗಳನ್ನು ಅಭಿವೃದ್ಧಿಪಡಿಸಬೇಕು. ಅದರಲ್ಲೂ ಉತ್ತಮ ಶಾಲೆ, ಕಾಲೇಜು ಮತ್ತು ಆಸ್ಪತ್ರೆಗಳನ್ನು ನಿರ್ಮಿಸದಿದ್ದಲ್ಲಿ ಜನ ಅಲ್ಲಿಗೆ ಹೋಗಿ ನೆಲೆಸುವುದಿಲ್ಲ. ಈಗ ಪ್ರಮುಖ ನಗರಗಳಿಗೆ ವೈಮಾನಿಕ ಸಂಪರ್ಕ ಕಲ್ಪಿಸಲಾಗುತ್ತಿದೆ. ಆದರೆ ಉತ್ತಮ ಶಾಲೆ ಮತ್ತು ಆಸ್ಪತ್ರೆ ನಿರ್ಮಾಣಗೊಳ್ಳುತ್ತಿಲ್ಲ. ಇದಕ್ಕೆ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸಂಸ್ಥೆಗಳನ್ನು ನಿರ್ಮಿಸಲು ಯೋಜನೆಗಳನ್ನು ಸಿದ್ಧಪಡಿಸಬೇಕು. ದೆಹಲಿಯಲ್ಲಿ ಆಡಳಿತದಿಂದ ಹಿಡಿದು ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆ ಕೇಂದ್ರೀಕೃತಗೊಂಡಿದ್ದರಿಂದ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ.ನಾವು ರಾಜಕೀಯ ಅಧಿಕಾರ ವಿಕೇಂದ್ರೀಕರಣಕ್ಕೆ ವಿಶೇಷ ಒತ್ತು ನೀಡಿದ್ದೇವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವಿಕೇಂದ್ರೀಕರಣ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ನಿಸರ್ಗ ನಮಗೆ ಸಾಕಷ್ಟು ಕೊಡುಗೆ ನೀಡಿದೆ. ಅದನ್ನು ಬಳಸಿಕೊಂಡು ಕೃಷಿ, ಕೈಗಾರಿಕೆ, ವಾಣಿಜ್ಯ ಮತ್ತು ಸೇವಾ ವಲಯಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಆಗ ರಾಜ್ಯದ ಸರ್ವತೋಮುಖ ಬೆಳವಣಿಗೆ ಕಾಣಬಹುದು. ಸ್ವಾತಂತ್ರö್ಯ ಬಂದಾಗ ಆರ್ಥಿಕ ಮತ್ತು ಸಾಮಾಜಿಕ ಅಸಮತೋಲನ ಎದ್ದು ಕಾಣುತ್ತಿತ್ತು. ಈಗಲೂ ಅದು ಮುಂದುವರಿಯಬಾರದು. ರಾಜಕೀಯ ಪಕ್ಷಗಳ ನೀತಿ ನಿಲುವಿನಲ್ಲಿ ಆಮೂಲಾಗ್ರ ಬದಲಾವಣೆ ಬರಬೇಕು.ಅದು ದೆಹಲಿಯಿಂದ ಆರಂಭವಾಗಬೇಕು.