ಬೆಂಗಳೂರು: ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರ ಪರಿಷ್ಕರಣೆಯಾಗಿದೆ. ಆಗಸ್ಟ್ 1ರಿಂದಲೇ ನೂತನ ದರಗಳು ಜಾರಿಗೆ ಬಂದಿವೆ. ಈ ದರದ ಕುರಿತು ಆಟೋ ಚಾಲಕರಲ್ಲಿಯೇ ಒಮ್ಮತವಿಲ್ಲ. ಹೊಸ ಮೀಟರ್ ಅಳವಡಿಕೆ ಮಾಡಿಕೊಳ್ಳದ ಚಾಲಕರು ಬಡ, ಮಧ್ಯಮ ವರ್ಗದ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಬಾಯಿಗೆ ಬಂದಷ್ಟು ದರವನ್ನು ಹೇಳಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.
ನಗರದ ಆಟೋ ಚಾಲಕರಿಗೆ ಮೀಟರ್ ಹಾಕಿ ಅಭ್ಯಾಸವೇ ಇಲ್ಲದಂತೆ ಆಗಿದೆ. ಈಗ ಹೊಸ ದರ ಏರಿಕೆ ಮುಂದಿಟ್ಟುಕೊಂಡು ಆಟೋ ಚಾಲಕರು ದುಬಾರಿ ಹಣ ವಸೂಲಿ ಮಾಡುತ್ತಿದ್ದಾರೆ. ಹೊಸ ದರ ಜಾರಿಗೆ ಬಂದು 14 ದಿನ ಕಳೆದರೂ ಬೆಂಗಳೂರಿನ ಆಟೋಗಳಲ್ಲಿ ಹೊಸ ಮೀಟರ್ ದರ ಅಳವಡಿಕೆಯಾಗಿಲ್ಲ.
ಉದ್ಯಾನ ನಗರಿಯಲ್ಲಿ ಲಕ್ಷಾಂತರ ಆಟೋಗಳಿವೆ. ಬಡವರ ಹಾಗೂ ಮಧ್ಯಮ ವರ್ಷದ ಜನರ ಸಂಚಾರಕ್ಕೆ, ಜೀವನ ನಿರ್ವಹಣೆಗೆ ಆಟೋಗಳು ಬಹುಮುಖ್ಯವಾಗಿದೆ. ಆದರೆ ಚಾಲಕರು ಕೇಳುವ ದುಪ್ಪಟ್ಟು ಹಣಕ್ಕೆ ಹೆದರಿ ಜನರು ಆಟೋ ಪ್ರಯಾಣದಿಂದ ದೂರ ಉಳಿಯುತ್ತಿದ್ದಾರೆ.
ಅಪ್ಲಿಕೇಶನ್ ಆಧಾರಿತ ಸೇವೆಗಳು ಆರಂಭವಾದ ಬಳಿಕ ಬೆಂಗಳೂರಿನಲ್ಲಿ ಬಹುತೇಕ ಆಟೋ ಚಾಲಕರು ಮೀಟರ್ ಹಾಕುವುದಿಲ್ಲ. ಬದಲಿಗೆ ತಮ್ಮ ಬಾಯಿಯಲ್ಲಿ ಥಟ್ ಅಂತ ದುಪ್ಪಟ್ಟು ದರವನ್ನೇ ಹೇಳುತ್ತಾರೆ. ಆದ್ದರಿಂದ ಈಗಾಗಲೇ ಪ್ರಯಾಣಿಕರು ಅಸಮಾಧಾನಗೊಂಡಿದ್ದು, ಈಗ ಹೊಸ ದರ ಬಂದ ಮೇಲೆ ಚಾಲಕರ ದರ್ಪ, ಸುಲಿಗೆ ಅತಿಯಾಗಿದೆ.
ದುಪ್ಪಟ್ಟು ಹಣ ನೀಡಿ ಜನರು ಸಂಚಾರ ನಡೆಸಬೇಕು ಇಲ್ಲವೇ ಮತ್ತೊಂದು ಆಟೋಗೆ ಕಾಯಬೇಕು. ಬರುವ ಮತ್ತೊಂದು ಆಟೋ ಸಹ ಇದಕ್ಕಿಂತ ದರ ಹೆಚ್ಚು ಹೇಳುತ್ತಾರೆ. ಆಟೋ ಚಾಲಕರ ಸುಲಿಗೆಗೆ ಕಡಿವಾಣ ಇಲ್ಲವೇ? ಎಂದು ಜನರು ಪ್ರಶ್ನೆ ಮಾಡುವಂತೆ ಆಗಿದೆ.
ಎಷ್ಟು ಏರಿಕೆಯಾಗಿದೆ ದರ?: ಬೆಂಗಳೂರು ನಗರದಲ್ಲಿ ಆಗಸ್ಟ್ 1 ರಿಂದ ಆಟೋ ಮೀಟರ್ ದರ ಏರಿಕೆ ಮಾಡಲಾಗಿದೆ. ಈ ಹಿಂದೆ ಕಿ.ಮೀ.ಗೆ ಕನಿಷ್ಟ 30 ರೂ. ಇದ್ದ ದರವನ್ನು 36 ರೂ.ಗೆ ಹಾಗೂ ಪ್ರತಿ ಕಿ.ಮೀ. 15 ರೂ. ಇದ್ದ ದರವನ್ನು 18 ರೂ. ಏರಿಕೆ ಮಾಡಿ ಆದೇಶ ಮಾಡಲಾಗಿತ್ತು.
ಆದರೆ ದರ ಏರಿಕೆ ಆದರೂ ಇಲ್ಲಿಯವರೆಗೆ ಒಂದೇ ಒಂದು ಆಟೋದಲ್ಲೂ ಹೊಸ ಮೀಟರ್ ಕಂಡುಬರುತ್ತಿಲ್ಲ. ಹಳೆಯ ಮೀಟರ್‌ನಲ್ಲೇ ದುಪ್ಪಟ್ಟು ದರ ಪಡೆಯುತ್ತಿದ್ದಾರೆ. ಮೀಟರ್ ತಯಾರಿಕ ಕಂಪನಿಗಳು ರೀ ಕ್ಯಾಲಿಬ್ರೇಷನ್ ಮಾಡಲು ಆಟೋ ಚಾಲಕರಿಂದ 150 ರಿಂದ 400 ರೂ. ಪಡೆಯುತ್ತಿದ್ದಾರೆ.
ಹೊಸ ಮೀಟರ್ ಹಾಕಿಸಿಕೊಳ್ಳಲು ಕನಿಷ್ಟ 4000 ರೂ. ಬೇಕು. ಮೀಟರ್ ಬದಲಿಸುವವರಿಗೆ 800 ರಿಂದ 1000 ರೂ. ಕೊಡಬೇಕು ಮೀಟರ್ ಬದಲಾಯಿಸಲು ಇಷ್ಟು ಹಣ ಕೊಟ್ಟರೇ ಬೆಂಗಳೂರಿನಲ್ಲಿ ಸಂಸಾರ ಮಾಡಲು ಕಷ್ಟ, ಆಟೋ ನಂಬಿ ಗಳಿಸುವುದಕ್ಕಿಂತಲೂ ನಷ್ಟ ಮಾಡಿಕೊಳ್ಳುವುದೇ ಹೆಚ್ಚು ಎಂದು ಆಟೋ ಚಾಲಕ ಉದಯ್ ಕುಮಾರ್ ಹೇಳಿದ್ದಾರೆ.
ಆಟೋ ಚಾಲಕರು ದುಪ್ಪಟ್ಟು ಹಣವನ್ನು ವಸೂಲಿ ಮಾಡಲು ಮುಂದಾಗಿದ್ದಾರೆ ಎಂದು ಜನರು ಆರೋಪ ಮಾಡುತ್ತಲೇ ಇದ್ದಾರೆ. ಹೊಸ ಆಟೋ ಮೀಟರ್ ದರ ರೀ ಕ್ಯಾಲಿಬ್ರೇಷನ್ ಮಾಡಲು ಕೇವಲ 150 ರಿಂದ 400 ರೂ. ದರವಿದೆ. ಆದರೆ ಕಂಪನಿಗಳು ಮಾತ್ರ 900 ರಿಂದ 1000 ರೂ.ವರೆಗೂ ಕೇಳುತ್ತಿದ್ದಾರೆ ಎಂಬುದು ಚಾಲಕರ ದೂರು.
ಇದರಿಂದಾಗಿ ಆಟೋ ಚಾಲಕರು ಹೊಸ ಮೀಟರ್ ದರವನ್ನು ಬದಲಾಯಿಸಿಕೊಳ್ಳಲು ಮುಂದಾಗುತ್ತಿಲ್ಲ. ಸರ್ಕಾರ ನಿಗದಿ ಮಾಡಿರುವ ಹೊಸ ಮೀಟರ್ ದರ ಕಾಗದದಲ್ಲಿ ಮಾತ್ರ ಉಳಿದಿದೆ. ದರ ಹೆಚ್ಚಾಗಿದೆ ಎಂದು ಪ್ರಯಾಣಿಕರನ್ನು ಸುಲಿಗೆ ಮಾಡುವುದನ್ನು ಚಾಲಕರು ನಿಲ್ಲಿಸುತ್ತಿಲ್ಲ.
ಬೆಂಗಳೂರಿನಲ್ಲಿ ಬಹುತೇಕ ಆಟೋಗಳಲ್ಲಿ ಮೀಟರ್‌ಗಳು ಶೋಕಿಗೆ ಎಂಬ ರೀತಿಯಲ್ಲಿ ಕಂಡುಬರುತ್ತಿದೆ. ಯಾರೂ ಸಹ ಮೀಟರ್ ಹಾಕುವುದಿಲ್ಲ. ಅವರು ಹೇಳಿದ ದರಕ್ಕೆ ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಅವರು ಬರುವುದಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.