Home Advertisement
Home ನಮ್ಮ ಜಿಲ್ಲೆ ಇಸ್ಲಾಂ ಧರ್ಮದ ಶರಣರಿಂದ ಹಿರೇಮಠಕ್ಕೆ ೨೫ ಲಕ್ಷ ವೆಚ್ಚದ ರಥ

ಇಸ್ಲಾಂ ಧರ್ಮದ ಶರಣರಿಂದ ಹಿರೇಮಠಕ್ಕೆ ೨೫ ಲಕ್ಷ ವೆಚ್ಚದ ರಥ

0
161

ನರಗುಂದ: ಸ್ಥಳೀಯ ಪಂಚಗೃಹ ಗುಡ್ಡದ ಹಿರೇಮಠದ ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡುವ ಉದ್ದೇಶದಿಂದ ಇಲ್ಲಿಯ ಅರ್ಭಾಣ ಓಣಿಯಲ್ಲಿನ ಮಾಬುಸುಬಾನಿ ದರ್ಗಾದ ಸೇವಕ, ಶರಣರಾದ ಇಮಾಮಸಾಬ ಮಹಮ್ಮದಸಾಬ ಶರಣರ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಬಾಬುಸಾಬ ಶರಣರು, ಅಂದಾಜು ೨೫ ಲಕ್ಷ ರೂ. ವೆಚ್ಚದಲ್ಲಿ ಆಕರ್ಷಕ ಶೈಲಿಯಲ್ಲಿ ಕುಸರಿ ಕೆತ್ತನೆ ಮಾಡಿರುವ ವೈವಿಧ್ಯ ಮಯವಾದ ರಥ ಕೊಡುಗೆಯಾಗಿ ನೀಡಿದ್ದಾರೆ.
ಸ್ಥಳೀಯ ಅರ್ಭಾಣ ಓಣಿಯ ಮಾಬುಸುಬಾನಿ ದರ್ಗಾದ ಸೇವಕರಾಗಿ ಇಮಾಮಸಾಬ ಜಮಾದಾರರು ಲಿಂಗೈಕ್ಯರಾದ ಬಳಿಕ ಬಾಬುಸಾಬ ಜಮಾದಾರ ಮಾಬುಸುಬಾನಿ ದರ್ಗಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೂ- ಮುಸ್ಲಿಂ ಭಾವೈಕ್ಯತೆಯ ಈ ಪ್ರದೇಶದಲ್ಲಿ ಬಹುತೇಕ ಹಿಂದುಗಳೇ ವಾಸ ಮಾಡುತ್ತಿದ್ದಾರೆ. ಪಂಚಗೃಹ ಗುಡ್ಡದ ಹಿರೇಮಠಕ್ಕೆ ಭಕ್ತಿಭಾವದಿಂದ ರಥ ಕೊಡುಗೆಯಾಗಿ ಅರ್ಪಿಸುತ್ತಿದ್ದು, ಭಾವೈಕ್ಯತೆ ಸಾಕ್ಷಿಯಾಗಿದೆ. ಇದೇ ದಿ.೭ರಂದು ಮುಂಜಾನೆ ೯ಕ್ಕೆ ಅರ್ಭಾಣ ಓಣಿಯ ಮಾಬುಸುಬಾನಿ ದರ್ಗಾದ ಎದುರಿನಲ್ಲಿ ಉಜ್ಜಯನಿ ಸದ್ಧರ್ಮ ಮಹಾಸಂಸ್ಥಾನ ಪೀಠದ ಜ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯದಲ್ಲಿ ನಾಡಿದ ವಿವಿಧ ಮಠಾಧೀಶರು ಉಪಸ್ಥಿತಿಯಲ್ಲಿ ಧರ್ಮಸಭೆ ನಡೆಯಲಿದೆ. ಸುಮಂಗಲೆಯರ ೧೦೧ ಕುಂಭಮೇಳದೊಂದಿಗೆ, ಕರಡಿ ಮಜಲು, ಸಕಲ ವಾದ್ಯ ವೈಭವಗಳೊಂದಿಗೆ ಬೃಹತ್ ಮೆರವಣಿಗೆಯು ಮಾಬುಸುಬಾನಿ ದರ್ಗಾ ಆವರಣದಿಂದ ಶಿವಾಜಿ ವೃತ್ತ ಮೂಲಕ ಬಸವೇಶ್ವರ ವೃತ್ತ, ಸರ್ವಜ್ಞ ವೃತ್ತ, ಗಾಂಧಿ ವೃತ್ತ ಮಾರ್ಗವಾಗಿ ಶ್ರೀಮಠಕ್ಕೆ ನೂತನ ರಥ ಕಳಸ ಹಾಗೂ ಹಗ್ಗವನ್ನು ಪಂಚಗೃಹ ಗುಡ್ಡದ ಹಿರೇಮಠಕ್ಕೆ ಅರ್ಪಿಸಲಾಗುತ್ತಿದೆ.