ಅಕ್ರಮ ಇ -ಸಿಗರೇಟ್ ವಶ ನಾಲ್ವರ ಸೆರೆ

0
9


ಮಂಗಳೂರು: ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ನಗರದ ಲಾಲ್‌ಭಾಗ್ ಸಾಯಿಬಿನ್ ಕಾಂಪ್ಲೆಕ್ಸ್ ನೆಲಮಹಡಿಯ ಮೂರು ಅಂಗಡಿಗಳಿಗೆ ಬರ್ಕೆ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೂಲತಃ ಸುಳ್ಯದ ಸ್ವಾತಿ, ಮಣ್ಣಗುಡ್ಡೆಯ ಶಿವಕುಮಾರ್, ಕುತ್ತಾರ್ ಸಮೀಪದ ಹಸನ್ ಶರೀಫ್ ಮತ್ತು ರಹಮತುಲ್ಲಾ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಇ-ಸಿಗರೇಟ್ ನಿರ್ಬಂಧ ಹಾಗೂ ಕೊಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತರ ಪೈಕಿ ಇಬ್ಬರಿಗೆ ಠಾಣೆಯಲ್ಲೇ ಜಾಮೀನು ಲಭಿಸಿದ್ದರೆ, ಇನ್ನಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಈ ಅಂಗಡಿಗಳಲ್ಲಿ ಕೇಂದ್ರ ಸರಕಾರ ನಿಷೇಧಿಸಿದ ಇ-ಸಿಗರೇಟ್ಗಳನ್ನು ಅಕ್ರಮ ಮಾರಾಟ ಮಾಡಿದ್ದಲ್ಲದೆ ಸರ್ಕಾರದ ಎಚ್ಚರಿಕೆಯನ್ನು ನಮೂದಿಸದೆ ಕಾನೂನು ಬಾಹಿರವಾಗಿ ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಸುಮಾರು ೨.೭೦ ಲಕ್ಷ ರೂ.ಮೌಲ್ಯದ ಇ-ಸಿಗರೇಟ್ ಹಾಗೂ ವಿದೇಶಿ ಸಿಗರೇಟ್ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ನಾಗೇಶ್ ಹಸ್ಲರ್, ರೇಖಾ, ಶೋಭಾ, ಧರ್ಮಾವತಿ, ಸಿಬ್ಬಂದಿಗಳಾದ ರಾಘವೇಂದ್ರ, ಜಲಜಾಕ್ಷಿ, ನಿತೇಶ್, ಮಂಜುನಾಥ್, ಅಜಿತ್ ಕುಮಾರ್, ವಿಜಯ ಕುಮಾರ್, ಚೇತನ್ ಕುಮಾರ್, ರಾಮಲಿಂಗ, ಸಿದ್ದು, ಚಂದ್ರಿಕಾ ಪಾಲ್ಗೊಂಡಿದ್ದರು.

Previous articleಪಶ್ಚಿಮಘಟ್ಟದಿಂದ ಕೋಲಾರದವರೆಗೆ ನೀರು
Next articleದಂಪತಿ ಆತ್ಮಹತ್ಯೆ