ಅನೈತಿಕ ಸಂಬಂಧದ ಅಪವಾದ – ಮಹಿಳೆ ತಲೆ ಬೋಳಿಸಿ ದೌರ್ಜನ್ಯ

0
23

ಯಾದಗಿರಿ: ಮಾನವೀಯತೆ ಕಳೆದುಹೋದಂತ ಕೃತ್ಯ ಯಾದಗಿರಿಯ ಶಹಾಪುರ ತಾಲೂಕಿನ ಚಾಮನಾಳ ತಾಂಡಾದಲ್ಲಿ ನಡೆದಿದೆ. ಅನೈತಿಕ ಸಂಬಂಧದ ಆರೋಪ ಹೊರಿಸಿ 35 ವರ್ಷದ ಮಹಿಳೆಗೆ ತಲೆ ಬೋಳಿಸಿ, ಸುಣ್ಣ ಹಚ್ಚಿ, ಕಾರದ ಪುಡಿ ಎರಚಿ ಚಿತ್ರಹಿಂಸೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತೆಯಾಗಿರುವವರು ಗಂಗಾಭಾಯಿ ಚಿನ್ನಾ ರಾಠೋಡ್ (35). ಆಕೆಯ ಮೇಲೆ ಸ್ಥಳೀಯರು ಕ್ರೂರ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಕೆಂಭಾವಿ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಕೇಸ್ ದಾಖಲಾಗಿದೆ.

ಮಹಿಳೆಯ ಆರೋಗ್ಯ ಸಮಸ್ಯೆಯಿಂದಾಗಿ ಕಲಬುರಗಿಯಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ ಆಗಾಗ ತೆರಳುತ್ತಿದ್ದ ಗಂಗಾಭಾಯಿ ಅವರನ್ನು ಅಳಿಯ ಅನೀಲ್ ರಾಠೋಡ್ ಕರೆದುಕೊಂಡು ಹೋಗುತ್ತಿದ್ದ. ಈ ಸಂಬಂಧವನ್ನು ತಪ್ಪಾಗಿ ಅರ್ಥಮಾಡಿಕೊಂಡ ಆರೋಪಿಗಳು, “ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ?” ಎಂದು ಆರೋಪಿಸಿ ಗಂಗಾಭಾಯಿಯನ್ನು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 11 ಜನರು ಸೇರಿ ಆಕೆಯನ್ನು ನೆಲಕ್ಕೆ ಕೆಡವಿದ್ದಾರೆ. ನಂತರ ಆಕೆಯನ್ನು ಹಿಡಿದುಕೊಂಡು ಕೂದಲನ್ನು ಕತ್ತರಿಯಿಂದ ಕತ್ತರಿಸಿ, ತಲೆಗೆ ಸುಣ್ಣ ಹಚ್ಚಿ, ಕಾರದ ಪುಡಿ ಎರಚಿ ಕ್ರೂರವಾಗಿ ವರ್ತಿಸಿದ್ದಾರೆ. ಅಲ್ಲದೆ ಆಕೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಇದೆ.

ಈ ಘಟನೆಯ ಸಂಬಂಧ ಕಸ್ತೂರಿಭಾಯಿ ಮತ್ತು ಡಾಕಪ್ಪ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ 9 ಮಂದಿ — ವಿಜಯಕುಮಾರ್, ತಿಪ್ಪಣ್ಣ, ರಮೇಶ್, ದೇವಿಭಾಯಿ, ತಿಪ್ಪಿಭಾಯಿ, ರೂಪ್ಲಿಭಾಯಿ, ಅನುಸೂಯಾ, ಚಾವಳಿಭಾಯಿ ಮತ್ತು ತಿಪ್ಪಣ್ಣ ನಾಯ್ಕ — ಪರಾರಿಯಾಗಿದ್ದು, ಇವರಿಗಾಗಿ ಕೆಂಭಾವಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದು, ಮಹಿಳೆಯ ಮೇಲೆ ನಡೆದ ಈ ಅಮಾನವೀಯ ಕೃತ್ಯಕ್ಕೆ ಸಾಮಾಜಿಕ ವಲಯದಲ್ಲಿಯೂ ಖಂಡನೆ ವ್ಯಕ್ತವಾಗಿದೆ.

Previous articleದಾಂಡೇಲಿ: ಕಾರ್ಮಿಕ ವಿಮಾ ಆಸ್ಪತ್ರೆಗೆ ಸಿಬ್ಬಂದಿಗಳ ನೇಮಕಕ್ಕೆ ಆಗ್ರಹ
Next articleಗಾಂಧಿ ನಾಡಿಗೆ ನೊಬೆಲ್ ವಿಜೇತೆಯ ಸಲಾಂ! ಭಾರತದತ್ತ ವೆನೆಜುವೆಲಾ ನಾಯಕಿಯ ಚಿತ್ತ

LEAVE A REPLY

Please enter your comment!
Please enter your name here