Home ನಮ್ಮ ಜಿಲ್ಲೆ ಯಾದಗಿರಿ ಸಿಎಂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸಲಿದ್ದಾರೆ

ಸಿಎಂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸಲಿದ್ದಾರೆ

0
8

ಯಾದಗಿರಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಎಲ್ಲಾ ವಿಚಾರಗಳು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದು, ಮುಂಬರುವ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಂಡಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಸೋಮವಾರ ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸದ್ಯ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಆದ್ದರಿಂದ ಬಜೆಟ್ ಮಂಡಿಸುವ ಜವಾಬ್ದಾರಿಯೂ ಅವರದ್ದೇ. ಇದರಲ್ಲಿ ಗೊಂದಲ ಅಥವಾ ಅನುಮಾನಕ್ಕೆ ಯಾವುದೇ ಅವಕಾಶವಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR

ಸಂಕ್ರಾಂತಿ ಹಬ್ಬದ ನಂತರ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯಲಿದೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ಸಂಕ್ರಾಂತಿ ಮುಗಿದ ಬಳಿಕ ಅಧಿಕಾರ ಬದಲಾವಣೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹಬ್ಬ ಮುಗಿದ ನಂತರ ನೋಡೋಣ. ಈಗಾಗಲೇ ಯಾವುದೇ ತೀರ್ಮಾನವಾಗಿಲ್ಲ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಕ್ಷದ ಒಳರಾಜಕೀಯ ಚರ್ಚೆಗಳ ಕುರಿತು ಮಾತನಾಡಿದ ಅವರು, “ರಾಹುಲ್ ಗಾಂಧಿ ದೆಹಲಿಗೆ ಬಂದ ಬಳಿಕ ಡಿ.ಕೆ.ಶಿವಕುಮಾರ್ ಬೆಂಬಲಿಗರು ಮತ್ತೊಮ್ಮೆ ದೆಹಲಿಗೆ ಹೋಗಿ ಭೇಟಿಯಾಗುವಂತಹ ಸಂದರ್ಭವೇ ಇಲ್ಲ. ಪಕ್ಷಕ್ಕೆ ಹೈಕಮಾಂಡ್ ಇದೆ. ಯಾರೂ ಸ್ವಯಂಪ್ರೇರಿತವಾಗಿ ದೆಹಲಿಗೆ ಹೋಗುವುದಿಲ್ಲ. ಏನೇ ನಿರ್ಧಾರ ಕೈಗೊಳ್ಳಬೇಕಾದರೂ ಅದು ಸಂಪೂರ್ಣವಾಗಿ ಹೈಕಮಾಂಡ್‌ಗೆ ಬಿಟ್ಟ ವಿಚಾರ” ಎಂದು ಹೇಳಿದರು.

ಇದನ್ನೂ ಓದಿ: ಕೌಟುಂಬಿಕ ಕಲಹ: ಕಲಬುರಗಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಊಹಾಪೋಹಗಳಿಗೆ ಈ ಹೇಳಿಕೆ ಮಹತ್ವ ಪಡೆದಿದ್ದು, ಬಜೆಟ್ ಮಂಡನೆ ವಿಚಾರದಲ್ಲಿ ಗೊಂದಲಕ್ಕೆ ತೆರೆ ಎಳೆದಂತಾಗಿದೆ. ಸಿದ್ದರಾಮಯ್ಯ ಅವರ ನಾಯಕತ್ವದ ಮೇಲೆ ಪಕ್ಷದ ನಂಬಿಕೆ ಮುಂದುವರೆದಿದೆ ಎಂಬ ಸಂದೇಶವನ್ನೂ ಸಚಿವರ ಹೇಳಿಕೆ ನೀಡಿದೆ.