Home Advertisement
Home ನಮ್ಮ ಜಿಲ್ಲೆ ಯಾದಗಿರಿ ಜಮೀನು ದಾರಿ ವಿಚಾರಕ್ಕೆ ರಕ್ತಪಾತ: ಯಾದಗಿರಿಯಲ್ಲಿ ಯುವಕನ ಹತ್ಯೆ

ಜಮೀನು ದಾರಿ ವಿಚಾರಕ್ಕೆ ರಕ್ತಪಾತ: ಯಾದಗಿರಿಯಲ್ಲಿ ಯುವಕನ ಹತ್ಯೆ

0
83

ಯಾದಗಿರಿ: ಜಮೀನಿನ ದಾರಿ ವಿಚಾರವಾಗಿ ಕುಟುಂಬದೊಳಗಿನ ವೈಷಮ್ಯ ಕೊನೆಗೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಪರಮೇಶಿ ತಂದೆ ಮಲ್ಲಣ್ಣ ಗಿಂಡಿ (27) ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ಮಾಹಿತಿಯ ಪ್ರಕಾರ, ಜಮೀನಿಗೆ ಹೋಗುವ ದಾರಿಯ ವಿಚಾರವಾಗಿ ಕುಟುಂಬದ ಸದಸ್ಯರ ನಡುವೆ ಕಳೆದ ಕೆಲವು ದಿನಗಳಿಂದ ಉದ್ವಿಗ್ನತೆ ಹೆಚ್ಚುತ್ತಿತ್ತು. ಈ ವೈಷಮ್ಯವೇ ಸೋಮವಾರ ರಾತ್ರಿ ಗಲಾಟೆಗೆ ಕಾರಣವಾಗಿ, ಅದು ಮಂಗಳವಾರ ಬೆಳಗ್ಗೆ ಹತ್ಯೆಗೆ ತಿರುಗಿದೆ. ಗಲಾಟೆ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪರಮೇಶಿಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡಿರುವ ಮೃತನ ತಮ್ಮನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ತೀವ್ರತೆಯಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಘಟನಾ ಸ್ಥಳಕ್ಕೆ ಕೆಂಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 21 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ, ಕೆಲ ಆರೋಪಿಗಳು ಬಂಧನಕ್ಕೊಳಗಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವೈಷಮ್ಯದ ಮೂಲ ಕಾರಣ ಮತ್ತು ಪೂರ್ವಪರ ವಿಚಾರಣೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ