ಯಾದಗಿರಿ: ಗುರುಮಠಕಲ್ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್‌ನಲ್ಲಿ ಊಟ ಸೇವಿಸಿದ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಬುಧವಾರ ರಾತ್ರಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿಯರು ರಾತ್ರಿ ಊಟದಲ್ಲಿ ಚಿಕನ್ ಮತ್ತು ಚಪಾತಿ ಸೇವಿಸಿದ ಕೆಲವೇ ಗಂಟೆಗಳಲ್ಲೇ ವಾಂತಿ, ಭೇದಿ, ತಲೆ ಸುತ್ತು ಲಕ್ಷಣಗಳು ಕಾಣಿಸಿಕೊಂಡಿವೆ.
ತಕ್ಷಣವೇ ಅವರನ್ನು ಗುರುಮಠಕಲ್ ತಾಲೂಕು ಸರ್ಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದ್ದು, ಮೂವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದರಿಂದ ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಧಿಕಾರಿಗಳ ತುರ್ತು ಭೇಟಿ – ಪರಿಶೀಲನೆ: ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಓರಡಿಯಾ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಪರಿಶೀಲನೆಯ ನಂತರ ಅಧಿಕಾರಿಗಳು ಫುಡ್ ಪಾಯಿಸನಿಂಗ್ ಶಂಕೆ ವ್ಯಕ್ತಪಡಿಸಿದ್ದು, ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಪಾಲಕರು ಆತಂಕ ಪಡುವ ಅವಶ್ಯಕತೆ ಇಲ್ಲ ಈಗಾಗಲೇ ಎಲ್ಲಾ ಮಕ್ಕಳಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.























