ಯಾದಗಿರಿ: ಶಹಾಪುರ ತಾಲೂಕಿನ ಸಾದ್ಯಪುರ ಸಮೀಪದ ಶ್ರೀ ಲಕ್ಷ್ಮಿ ಬಾಲಾಜಿ ಕಾಟನ್ ಮಿಲ್‌ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಟದಲ್ಲಿ ಸುಮಾರು 60 ಟನ್ ಹತ್ತಿ ಹಾಗೂ ಕಾಟನ್ ಯಂತ್ರೋಪಕರಣಗಳು ಬೆಂಕಿಗಾಹುತಿಯಾಗಿ ₹1 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ಸಾಹೇಲ್ ಅವರಿಗೇ ಸ್ವಾಮ್ಯದ ಕಾಟನ್ ಮಿಲ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಬೆಂಕಿ ಏಕಾಏಕಿ ಕಾಟನ್ ಕೋಣೆಗಳಿಗೆ ವ್ಯಾಪಿಸಿದ್ದು, ಕ್ಷಣಾರ್ಧದಲ್ಲೇ ದಟ್ಟ ಹೊಗೆ ಮತ್ತು ಅಗ್ನಿ ರಭಸದೊಂದಿಗೆ ಕಾಟನ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಅಗ್ನಿಶಾಮಕ ದಳದಿಂದ ನಿಯಂತ್ರಣ ಕಾರ್ಯಾಚರಣೆ: ಅಗ್ನಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬಹು ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ನೀರಿನ ಟ್ಯಾಂಕರ್, ಪಂಪ್ ವಾಹನಗಳ ಮೂಲಕ ಬೆಂಕಿ ನಿಯಂತ್ರಣಕ್ಕೆ ತರಲಾಗಿದ್ದು, ಸುತ್ತಮುತ್ತ ಇರುವ ನಿವಾಸ ಪ್ರದೇಶಕ್ಕೆ ಬೆಂಕಿ ಹರಡುವದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡ ಪ್ರಮಾಣದ ಆರ್ಥಿಕ ನಷ್ಟ: ಬೆಂಕಿಯಲ್ಲಿ 60 ಟನ್‌ಗಿಂತ ಅಧಿಕ ಕಾಟನ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಾಟನ್ ಸಂಸ್ಕರಣಾ ಯಂತ್ರೋಪಕರಣಗಳು ಹಾನಿಗೀಡಾಗಿವೆ ಎಂದು ತಿಳಿದು ಬಂದಿದೆ. ಒಟ್ಟಾರೆ ಹಾನಿ ಮೌಲ್ಯ ₹1 ಕೋಟಿಗೂ ಅಧಿಕ ಎಂದು ಮಾಲೀಕರು ತಿಳಿಸಿದ್ದಾರೆ. ಅವಘಟಕ್ಕೆ ನಿಖರ ಕಾರಣ ಮತ್ತು ನಷ್ಟದ ಅಧಿಕೃತ ವರದಿ ವಿದ್ಯುತ್ ಇಲಾಖೆ ಮತ್ತು ಅಗ್ನಿಶಾಮಕ ವಿಭಾಗದಿಂದ ಹೊರಬರುವ ನಿರೀಕ್ಷೆ ಇದೆ.
ತನಿಖೆ ಮುಂದುವರಿಕೆ: ಘಟನೆಯ ಕುರಿತು ಅಗ್ನಿಶಾಮಕ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಮಗ್ರ ತನಿಖೆ ಕೈಗೊಳ್ಳಲಿದ್ದು, ಶಾರ್ಟ್ ಸರ್ಕ್ಯೂಟ್ ಮೂಲ ಕಾರಣವೇ ಅಥವಾ ವೈರಿಂಗ್ ಸಮಸ್ಯೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಬರಬೇಕಿದೆ.























