ಯಾದಗಿರಿ: ನಾಡಿನ ಸಮಗ್ರ ದಾಸ ಸಾಹಿತ್ಯ ರಚನೆಯಲ್ಲಿ ಪುರಂದರ ದಾಸರೆ ಅಗ್ರಗಣ್ಯರು, ಅವರು ರಚಿಸಿದ ಪ್ರತಿಯೊಂದು ಹಾಡುಗಳು ನಮ್ಮ ಜೀವನವನ್ನು ಬದಲಿಸಬಲ್ಲದು ಎಂದು ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ ಹೇಳಿದರು.
ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಪಟ್ಟಣದ ಉತ್ತರಾಧಿಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುರಂದರ ದಾಸರ ಜೀವನ ಚರಿತ್ರೆ ಕುರಿತು ಮಾತನಾಡಿದ ಅವರು, 15ನೇ ಶತಮಾನದಲ್ಲಿ ಅವತರಿಸಿದ ಪುರಂದರ ದಾಸರು ಸಾಕ್ಷಾತ್ ನಾರದ ಮಹರ್ಷಿಗಳ ಅವತಾರವೆಂದು ಪುರಣಗಳು ನಮಗೆ ತಿಳಿಸಿ ಕೊಡುತ್ತವೆ. ಪುರಂದರ ದಾಸರು ತಮ್ಮ ಜೀವಿತಾವಧಿಯವರೆಗೂ ನಾಡಿನ ಪ್ರತಿಯೊಂದು ಊರುಗಳಿಗೆ ಸಂಚರಿಸಿ ಪ್ರತಿಯೊಂದು ಸಮಾಜವನ್ನು ಉದ್ಧಾರ ಮಾಡಿದ ಮಹಾನ್ ಸಮಾಜ ಸುಧಾರಕ ಎಂದು ಬಣ್ಣಿಸಿದರು.
ಇದನ್ನೂ ಓದಿ: ನಾನು ಮುಂದಿನ ಚುನಾವಣೆಯ ಸಿಎಂ ಆಕಾಂಕ್ಷಿ
ಸುಮಾರು 4 ಲಕ್ಷ 75 ಸಾವಿರ ದಾಸರ ಕೀರ್ತನೆಗಳನ್ನು ರಚಿಸಿದ ಕೀರ್ತಿ ಪುರಂದರ ದಾಸರಿಗೆ ಸಲ್ಲುತ್ತದೆ. ಕರ್ನಾಟಕ ಸಂಗೀತ ಪಿತಾಮಹ ಎಂದೇ ಕರೆಯಿಸಿಕೊಂಡ ಪುರಂದರದಾಸರು ಮಾಯಾಮಾಳವಗೌಳ ರಾಗವನ್ನು ಪರಿಚಯಿಸಿದರು. ಒಬ್ಬ ಮಹಾನ ಜಿಪುಣ ವ್ಯಕ್ತಿ ಭಗವಂತನ ಅನುಗ್ರಹವಾದರೆ ಎಂಥಾ ವೈರಾಗ್ಯ ಪಡೆಯುತ್ತಾನೆ ಎಂಬುದು ಇವರ ಜೀವನವೆ ನಮಗೆ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಚಿತ್ರ ಕಲಾವಿದ ಹಳ್ಳೇರಾವ ಕುಲಕರ್ಣಿ ಮಾತನಾಡಿ, ನಾಡಿನ ದಾಸ ಸಾಹಿತ್ಯವನ್ನು ಬೆಳೆಸಿ ಉಳಿಸುವಲ್ಲಿ ಪ್ರತಿಯೊಂದು ಸಮಾಜದಲ್ಲಿ ಯುವಕರ ಪಾತ್ರ ಅತೀ ಮುಖ್ಯವಾಗಿದೆ. ದಾಸರ ಕೃತಿಗಳನ್ನು ಸಂರಕ್ಷಿಸಲು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸರ್ಕಾರ ರಾಜ್ಯದ ಪ್ರತಿ ವಿಶ್ವವಿದ್ಯಾಲಯದಲ್ಲಿ ದಾಸ ಸಾಹಿತ್ಯ ಅಧ್ಯಯನ ಪೀಠವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಬೆಳಿಗ್ಗೆ ದಾಸರ ವೇಷ ಧರಿಸಿದ ಹಳ್ಳೆಪ್ಪಾಚಾರ್ಯ ಚನ್ನೂರ ಇವರ ನೇತೃತ್ವದಲ್ಲಿ ರಘೂತ್ತಮ ಭಜನಾ ಮಂಡಳಿಯ ಸರ್ವ ಸದಸ್ಯರು ಹರಿನಾಮ ಸ್ಮರಣೆಯ ಮೂಲಕ ಮನೆ ಮನೆಗೆ ತೆರಳಿ ಯಾಯಿವಾರ (ಗೋಪಾಳ) ಬೇಡಲಾಯಿತು. ಪುರಂದರ ದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಅಲಂಕಾರ, ತೀರ್ಥ ಪ್ರಸಾದ ನೆರವೇರಿತು.









