ಯಾದಗಿರಿ: ಭೂಮಿಯ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಕಲಿ ಮುಟೇಷನ್ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸೀಲ್–ಮೊಹರುಗಳನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸಿದ ಆರೋಪದ ಮೇಲೆ ಡಿಸಿಸಿ ಬ್ಯಾಂಕ್ ನಿರ್ದೇಶಕರೊಬ್ಬರು ಸೇರಿದಂತೆ ಮೂವರ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಮ್ಮಾಪುರ ನಿವಾಸಿ ಅಶೋಕ ಸಜ್ಜನ್(58) ನೀಡಿದ ಲಿಖಿತ ದೂರಿನ ಮೇರೆಗೆ, ಬಸವರಾಜ ಸಜ್ಜನ್, ಸುರೇಶ ಸಜ್ಜನ್ ಹಾಗೂ ಪ್ರಕಾಶ ಸಜ್ಜನ್ ಎಂಬವರ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಕಲಿ ದಾಖಲೆಗಳ ಆರೋಪ: ದೂರುದಾರರ ಪ್ರಕಾರ, ವಣಕಿಹಾಳ ಗ್ರಾಮದ ಸರ್ವೆ ನಂ. 86/1 ಹಾಗೂ ಹಸನಾಪುರ ಗ್ರಾಮದ ಸರ್ವೆ ನಂ. 44/1, 44/5, 44/6 ಮತ್ತು 44/7 ಗೆ ಸಂಬಂಧಿಸಿದಂತೆ 1996ರ ಮುಟೇಷನ್ ನಂ. 28 ಮತ್ತು 30 ರ ದಾಖಲೆಗಳನ್ನು ಆರೋಪಿತರು ನಕಲಿಯಾಗಿ ತಯಾರಿಸಿ, ಅವುಗಳನ್ನು ನೈಜ ದಾಖಲೆಗಳೆಂದು ತೋರಿಸಿ ವಿವಿಧ ಹಂತಗಳಲ್ಲಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜಯಮಾಲಾ, ಸಾ.ರಾ. ಗೋವಿಂದ್‌ಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ
ಈ ಮುಟೇಷನ್ ದಾಖಲೆಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಂಬಂಧಿತ ಅಧಿಕಾರಿಗಳ ಸಹಿ ಇಲ್ಲದೇ, ಸರ್ಕಾರಿ ಕಚೇರಿಗಳ ಸೀಲ್–ಮೊಹರುಗಳನ್ನು ದುರುಪಯೋಗಪಡಿಸಿಕೊಂಡು ದಾಖಲೆಗಳನ್ನು ತಯಾರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸುರಪುರ ತಹಶೀಲ್ದಾರ್ ಮಟ್ಟದಲ್ಲಿ ನಡೆದ ಪರಿಶೀಲನೆಗಳಲ್ಲಿ ಸಲ್ಲಿಸಲಾದ ಮುಟೇಷನ್ ದಾಖಲೆಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಹೆಸರಿನಲ್ಲಿ ನೀಡಲಾಗಿದೆ ಎನ್ನಲಾದ ನಕಲು ಪ್ರತಿಗಳು ನೈಜವಲ್ಲ, ಕೊಟ್ಟಿ ತಯಾರಿಸಿದ ದಾಖಲೆಗಳು ಎಂಬುದು ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.























