ಯಾದಗಿರಿ: ಸಾಮಾಜಿಕ ಬಹಿಷ್ಕಾರಕ್ಕೆ ಮನನೊಂದು ಮಾಂಗಲ್ಯ ಸರ ತೆಗೆದಿಟ್ಟು ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿಯ ಹೊರ ಭಾಗದ ಗಿರಿನಗರದ ನಿವಾಸಿ ಕಮಲಮ್ಮ (42) ವಡಗೇರ ತಾಲೂಕಿನ ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ಹಾರಿ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ಕಮಲಮ್ಮ ಸಿಳ್ಳೆ ಕ್ಯಾತ ಸಮುದಾಯವದರು. ಅವರ ಪುತ್ರ ಎರ್ರಿಸ್ವಾಮಿ ವಿರುದ್ಧ ಅನೈತಿಕ ಸಂಬಂಧ ಎಂದು ಆರೋಪಿಸಿ ತಮ್ಮದೇ ಸಮಾಜದ ಮುಖಂಡರಿಂದ ಇಡೀ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಮೀನುಗಾರಿಕೆ ಜೊತೆಗೆ ಮಾರಾಟ ಮಾಡಲು ಮುಖಂಡರು ಅವಕಾಶ ನೀಡಿಲ್ಲ. ಇದೆ ಕಾರಣಕ್ಕೆ ಕಮಲಮ್ಮ ನೊಂದುಕೊಂಡು, ಮಗಳ ಊರಾದ ಜೋಳದಡಗಿ ಗ್ರಾಮಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮುನ್ನ ಬ್ಯಾರೇಜ್ ಮೇಲೆ ಮಾಂಗಲ್ಯ ಸರ ತೆಗೆದಿಟ್ಟಿದ್ದಾರೆ. ಇಂದು ಮಧ್ಯಾಹ್ನ ಅಗ್ನಿ ಶಾಮಕದಳ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ.




















