Home ನಮ್ಮ ಜಿಲ್ಲೆ ವಿಜಯಪುರ ವಿಜಯಪುರದಲ್ಲಿ ಸಾರಿಗೆ ಕ್ರಾಂತಿ : 25 ನೂತನ ಬಸ್‌ಗಳ ಲೋಕಾರ್ಪಣೆ

ವಿಜಯಪುರದಲ್ಲಿ ಸಾರಿಗೆ ಕ್ರಾಂತಿ : 25 ನೂತನ ಬಸ್‌ಗಳ ಲೋಕಾರ್ಪಣೆ

0
13

ವಿಜಯಪುರ: ವಿಜಯಪುರ ನಗರದ ಸಾರ್ವಜನಿಕ ಸಾರಿಗೆ ಕ್ಷೇತ್ರಕ್ಕೆ ಇಂದು ಐತಿಹಾಸಿಕ ದಿನವಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ವತಿಯಿಂದ ನಗರದ ಸಾರಿಗೆ ವ್ಯವಸ್ಥೆಗೆ 25ಕ್ಕೂ ಹೆಚ್ಚು ನೂತನ ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, “ಇಂದು ಒಟ್ಟಾರೆಯಾಗಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 100ಕ್ಕೂ ಹೆಚ್ಚು ನೂತನ ಬಸ್‌ಗಳು ಸೇರ್ಪಡೆಯಾಗಿವೆ. ಇದು ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಸಾರ್ವಜನಿಕರಿಗೆ ಉತ್ತಮ ಹಾಗೂ ಸುಗಮ ಸಾರಿಗೆ ಸೌಲಭ್ಯ ಒದಗಿಸುವ ದಿಶೆಯಲ್ಲಿ ದೊಡ್ಡ ಸಾಧನೆಯಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

ನಾಲ್ಕು ವರ್ಷಗಳ ನಂತರ ಬಸ್ ಸೇರ್ಪಡೆ: ಸಚಿವ ಎಂ.ಬಿ. ಪಾಟೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಕಳೆದ ನಾಲ್ಕು ವರ್ಷಗಳಿಂದ ನೂತನ ಬಸ್‌ಗಳ ಸೇರ್ಪಡೆ ಆಗದೇ ಸಾರ್ವಜನಿಕರ ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಗಿತ್ತು. ಇದೀಗ ಒಂದೇ ಸಮಯದಲ್ಲಿ 100ಕ್ಕೂ ಹೆಚ್ಚು ಬಸ್‌ಗಳು KKRTC ವೃಂದಕ್ಕೆ ಸೇರಿರುವುದು ಜನತೆಗೆ ಅಪಾರ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಈ ಪೈಕಿ ವಿಜಯಪುರ ನಗರಕ್ಕೆ ಮಾತ್ರ 25 ನೂತನ ಬಸ್‌ಗಳನ್ನು ನಿಯೋಜಿಸಲಾಗಿದೆ. ಇದರಿಂದ ನಗರದ ಒಳನಾಡು ಸಾರಿಗೆ ವ್ಯವಸ್ಥೆ ಮತ್ತಷ್ಟು ಸುಗಮವಾಗಲಿದ್ದು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಸಾಮಾನ್ಯ ನಾಗರಿಕರಿಗೆ ಪ್ರಯೋಜನವಾಗಲಿದೆ.

ಇದನ್ನೂ ಓದಿ: ಬುದ್ಧಿಮಾಂದ್ಯ ಮಕ್ಕಳ ಮೇಲೆ ಅಮಾನವೀಯ ಹಲ್ಲೆ

ಮುಖ್ಯಮಂತ್ರಿ ಮತ್ತು ಸಚಿವರಿಗೆ ಅಭಿನಂದನೆ: ಈ ಮಹತ್ವದ ಕಾರ್ಯಕ್ಕೆ ಸಹಕಾರ ನೀಡಿದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ಶ್ರೀ ರಾಮಲಿಂಗ ರೆಡ್ಡಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಗಣ್ಯರ ಉಪಸ್ಥಿತಿ: ಇಂದಿನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ವಿಠ್ಠಲ ಕಟಕಧೋಂಡ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್, ಜಿಲ್ಲಾಧಿಕಾರಿ ಆನಂದ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ಋಷಿ ಆನಂದ್, ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ನಗರದ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಈ ಕ್ರಮದಿಂದ ವಿಜಯಪುರದಲ್ಲಿ ಸಾರಿಗೆ ಕ್ರಾಂತಿಯ ಹೊಸ ಅಧ್ಯಾಯ ಆರಂಭವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.