ಅಗ್ನಿ ಅವಘಡದಲ್ಲಿ 20ಕ್ಕೂ ಹೆಚ್ಚು ಕಾರುಗಳು ಭಸ್ಮ
ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 50ರ ಬಳಿ ಇರುವ ಹೆಚ್‌ಎಂಕೆ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, ಸುಮಾರು 20ಕ್ಕೂ ಹೆಚ್ಚು ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಹನುಮಂತ ಕನಮಡಿ ಅವರಿಗೆ ಸೇರಿದ ಈ ಸರ್ವೀಸ್ ಸೆಂಟರ್‌ನಲ್ಲಿ ವಿವಿಧ ಕಂಪನಿಗಳ ಕಾರುಗಳನ್ನು ರಿಪೇರಿ ಹಾಗೂ ಸರ್ವಿಸ್‌ಗಾಗಿ ನಿಲ್ಲಿಸಲಾಗಿತ್ತು. ಈ ವೇಳೆ ಏಕಾಏಕಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಶೆಡ್‌ಗೆ ವ್ಯಾಪಿಸಿ ಭಾರೀ ನಷ್ಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರೋಣ: ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು, 15 ಮಂದಿ ಗಾಯ
ಸ್ಥಳೀಯರ ಮಾಹಿತಿ ಪ್ರಕಾರ, ಬೆಂಕಿಯ ಕೆನ್ನಾಲಿಗೆಗಳು ಎತ್ತರಕ್ಕೆ ಏರಿದ ಕಾರಣ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ವಿಜಯಪುರ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಹಲವು ಗಂಟೆಗಳ ಶ್ರಮದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಈ ಅಗ್ನಿ ಅವಘಡದಲ್ಲಿ ಸರ್ವೀಸ್ ಸೆಂಟರ್‌ನ ಒಳಗಿದ್ದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಕಾರು ಬಿಡಿಭಾಗಗಳು, ಯಂತ್ರೋಪಕರಣಗಳು ಹಾಗೂ ಇತರ ಸಾಮಗ್ರಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಜೊತೆಗೆ, ಸುಟ್ಟುಹೋದ ಕಾರುಗಳ ಒಟ್ಟು ಮೌಲ್ಯ ಒಂದು ಕೋಟಿ ರೂಪಾಯಿಗೂ ಅಧಿಕವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: BDK ಗ್ರೂಪ್ ಸಂಸ್ಥಾಪಕ ಖ್ಯಾತ ಕೈಗಾರಿಕೋದ್ಯಮಿ ಭರತ್ ಖಿಮ್ಜಿ ನಿಧನ
ಅದೃಷ್ಟವಶಾತ್, ಈ ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ವ್ಯಾಪಾರಸ್ಥ ಹನುಮಂತ ಕನಮಡಿ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ವಿಜಯಪುರ ನಗರದಲ್ಲಿ ಭದ್ರತೆ ಮತ್ತು ಅಗ್ನಿ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಮತ್ತೆ ನೆನಪಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.























