ವಿಜಯಪುರ: ಮಹಾರಾಷ್ಟ್ರದ ಉಜನಿ, ಸಿನಾ, ವೀರ ಜಲಾಶಯದಿಂದ ಭೀಮಾನದಿಗೆ 2.50 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಉದ್ದಕ್ಕೂ ವಾಹನಗಳು ನಿಂತು ಬಿಟ್ಟಿವೆ.
ಬುಧವಾರ ಬೆಳ್ಳಿಗೆಯಿಂದ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸಂಪೂರ್ಣ ಬಂದಾಗಿದೆ. ಹೀಗಾಗಿ ಸಾರಿಗೆ ಬಸ್ಸು ರಾಜ್ಯದ ಗಡಿಯವರೆಗೆ ಮಾತ್ರ ಸಂಚಾರಿಸಲು ಅವಕಾಶವಿದೆ. ರಾಜ್ಯದ ಒಳಗೆ ಮತ್ತು ಹೊರ ಸಂಚರಿಸುವ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಒಟ್ಟು 9 ಬಾಂದರುಗಳ ಮೇಲೆ ನೀರು ಹರಿಯುತ್ತಿದೆ. ಕರ್ನಾಟಕ-ಮಹಾರಾಷ್ಟ್ರ ಸಂದಿಸುವ ದಕ್ಷಿಣ ಸೊಲ್ಲಾಪುರ ತಾಲೂಕಿನ ವಡಕಬಳಿ ಮಧ್ಯದ ಸಿನಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದೆ.
ಭೀಮಾನದಿಗೆ ಅಡ್ಡಲಾಗಿ ಮಹಾರಾಷ್ಟ್ರ ಸುಮಾರು 50ಕ್ಕೂ ಹೆಚ್ಚು ಅನಧಿಕೃತ ಜಲಾಶಯಗಳನ್ನು ನಿರ್ಮಿಸಿಕೊಂಡಿದ್ದು, ಮಳೆ ಹೆಚ್ಚಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿ ಉಜಣಿ ಅಣೆಕಟ್ಟಿಗೆ ನೀರು ಹರಿದು ಬಂದು ಭರ್ತಿಯಾದಾಗ ಏಕಾಏಕಿ ಎಲ್ಲ ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತದೆ.
ಕಳೆದ ಎರಡು ದಶಕಗಳಲ್ಲಿ ಈ ರೀತಿ ಮನುಷ್ಯ ನಿರ್ಮಿತ ಪ್ರವಾಹ ಪರಿಸ್ಥಿತಿಯನ್ನು ಈ ಭಾಗದ ಜನರು ಹಲವಾರು ಬಾರಿ ಅನುಭವಿಸಿದ್ದಾರೆ. 2008 ರಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಈ ಗ್ರಾಮಗಳನ್ನು ಸ್ಥಳಾಂತರಿಸುವ ಯೋಜನೆ ಇತ್ತಾದರೂ ಅನುಷ್ಠಾನ ಪೂರ್ಣಪ್ರಮಾಣದಲ್ಲಿ ಆಗಿಲ್ಲ.