ವಿಜಯಪುರ: ಹಲಸಂಗಿ ಗ್ರಾಮದಲ್ಲಿ ಮೋಟಾರ್ ಸೈಕಲ್ ಮೇಲೆ ಬಂದು ಗನ್ ತೋರಿಸಿ ಬಂಗಾರ ಅಂಗಡಿ ದೋಚಿದ್ದ ಇಬ್ಬರು ಅಂತಾರಾಜ್ಯ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಜಪ್ತು ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಲತಃ ಸಂಖ ಗ್ರಾಮಕ್ಕೆ ಸೇರಿದರೂ ಹಾಲಿ ಜತ್ತ ನಿವಾಸಿ ಹಣಮಂತ ವಾಘೋಲಿ (28), ಪುಣೆಯಲ್ಲಿ ನೆಲೆಸಿರುವ ಶಿವರಾಜ್ ಉರ್ಫ್ ಗೌಡಪ್ಪ ನಾವಿ (28) ಎಂದು ಗುರುತಿಸಲಾಗಿದೆ.
205 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ, 3 ಕಂಟ್ರಿ ಪಿಸ್ತೂಲ್, 26 ಜೀವಂತ ಗುಂಡು, ಒಂದು ಏರ್‌ಗನ್, ಮೋಟಾರ್ ಸೈಕಲ್ ಜಪ್ತು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ವಿದೇಶದಲ್ಲಿ ಇನ್ನೊಬ್ಬ ಕನ್ನಡಿಗನ ನಿಗೂಢ ಸಾವು
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಜನವರಿ 26 ರಂದು ಹಲಸಂಗಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಇಲಾಖೆಯು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಶೋಕಿ ಆಸೆ, ದುಬಾರಿ ಲೈಫ್‌ಸ್ಟೈಲ್ ಮೋಹದಿಂದಾಗಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಮೊದಲು ಸೊಲ್ಲಾಪುರದ ಬಂಗಾರ ಅಂಗಡಿ ದೋಚುವ ಕಾರ್ಯಯೋಜನೆ ರೂಪಿಸಿದ್ದು, ನಂತರ ಅಲ್ಲಿ ಜನಸಂದಣಿ ಅಧಿಕವಾಗಿರುವುದರಿಂದ ಗಡಿ ಭಾಗದ ಹಲಸಂಗಿಯನ್ನು ಆಯ್ಕೆ ಮಾಡಿ ದರೋಡೆ ಮಾಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.






















