ರೈತರು ಬೆಳೆದ ಬೆಳೆಗಳಿಂದ ಸಚಿವ ಎಂ.ಬಿ. ಪಾಟೀಲರಿಗೆ ತುಲಾಭಾರ

0
6

ತಿಕೋಟ (ವಿಜಯಪುರ): ಜಿಲ್ಲೆಯ ರೈತರ ಬದುಕಿಗೆ ನೀರಾವರಿಯ ಮೂಲಕ ಹೊಸ ಉಸಿರು ತುಂಬಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಕೃತಜ್ಞತೆಯ ಸಂಕೇತವಾಗಿ ರೈತರು ತಾವು ಬೆಳೆದ ಬೆಳೆಗಳನ್ನೇ ಬಳಸಿ ತುಲಾಭಾರ ನಡೆಸಿದ ವಿಶೇಷ ಕಾರ್ಯಕ್ರಮ ರೈತರು ತಮ್ಮ ಮನದಾಳದ ಪ್ರೀತಿಗೆ ಸಾಕ್ಷಿಯಾಯಿತು.

ಇಲ್ಲಿನ ಸಾತಲಿಂಗಯ್ಯ ಶಂಕರಯ್ಯ ಹಿರೇಮಠ ಅವರ ತೋಟದಲ್ಲಿ ಆಯೋಜಿಸಲಾಗಿದ್ದ ರೈತ ಕ್ಷೇತ್ರೋತ್ಸವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ವೇದಿಕೆಯಾಯಿತು. ಕಾರ್ಯಕ್ರಮಕ್ಕೆ ಇಲ್ಲಿನ ಹಿರೇಮಠದ ಶಿವಬಸವ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಿಕೋಟಾ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೈತರು ತಮ್ಮ ಮನದಾಳದ ಪ್ರೀತಿಯನ್ನು ಕಾರ್ಯರೂಪಕ್ಕೆ ತಂದರು.

ಇದನ್ನೂ ಓದಿ: ಗೃಹಲಕ್ಷ್ಮೀ ತಿಂಗಳ ಕಂತು ಈ ವಾರ ರಿಲೀಸ್

2013–18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ.ಬಿ. ಪಾಟೀಲರು ತಿಕೋಟಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನೀಡಿದ ನೀರಾವರಿ ಕೊಡುಗೆಗಳು ಇಂದು ರೈತರ ಬದುಕಿನಲ್ಲಿ ಹಸಿರಿನ ಕ್ರಾಂತಿಗೆ ಕಾರಣವಾಗಿವೆ. ಒಂದು ಕಾಲದಲ್ಲಿ ಬರಡು ಭೂಮಿಯಾಗಿ ಗುರುತಿಸಿಕೊಂಡಿದ್ದ ಈ ಭಾಗದಲ್ಲಿ ಈಗ ಪಪ್ಪಾಯಿ, ಪೇರಲೆ, ಕಬ್ಬು, ತರಕಾರಿ, ಅಡಿಕೆ, ಬಾಳೆ ಸೇರಿದಂತೆ ವಿವಿಧ ಬೆಳೆಗಳು ನಳನಳಿಸುತ್ತಿವೆ. ನೀರಾವರಿ ಯೋಜನೆಗಳ ಪರಿಣಾಮ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ.

ಈ ಹಿನ್ನಲೆಯಲ್ಲಿ, ತಿಕೋಟಾದ ರೈತರು ಸಚಿವ ಎಂ.ಬಿ. ಪಾಟೀಲರನ್ನು ಆಹ್ವಾನಿಸಿ, ತಾವು ಬೆಳೆದ ಬೆಳೆಗಳನ್ನೇ ಬಳಸಿ ತುಲಾಭಾರ ನೆರವೇರಿಸಿದರು. ರೈತರ ಈ ಪ್ರೀತಿಯ ಅಭಿವ್ಯಕ್ತಿಯನ್ನು ಕಂಡ ಸಚಿವರು ಕೆಲ ಕ್ಷಣಗಳು ಮೂಕವಿಸ್ಮಿತರಾದರು. ರೈತರ ಅಂತಃಕರಣದ ಕೃತಜ್ಞತೆ ಕಾರ್ಯಕ್ರಮದ ಮರ್ಮವಾಗಿತ್ತು.

ತುಲಾಭಾರ ಸ್ವೀಕರಿಸಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, “ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಏಕೈಕ ದಾರಿ ನೀರಾವರಿ ಸೌಲಭ್ಯ. ನನಗೆ ದೊರೆತ ಅವಕಾಶದಲ್ಲಿ ನನ್ನ ತವರು ಜಿಲ್ಲೆಯ ಜನರಿಗೆ ಕೈಲಾದಷ್ಟು ಮಾಡಿದ್ದೇನೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ನಡೆಸಿದ ಕಾನೂನು ಹೋರಾಟಗಳು ಮತ್ತು ಅದರಿಂದ ಬಂದ ತೀರ್ಪುಗಳೇ ಒಂದು ದೊಡ್ಡ ಗ್ರಂಥವಾಗಬಹುದು. ಶಾಸಕ ಹಾಗೂ ಸಚಿವನಾಗಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ” ಎಂದು ಭಾವನಾತ್ಮಕವಾಗಿ ಹೇಳಿದರು.

ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜಾರಿಯಾಗಲಿರುವ ಹೊಸ ನೀರಾವರಿ ಯೋಜನೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಈ ವೇಳೆ ಕಬ್ಬು ಬೆಳೆಗಾರರಿಗೆ ವಿಶೇಷ ತಜ್ಞರಿಂದ ಮಾರ್ಗದರ್ಶನ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉಪನ್ಯಾಸಗಳು ಕೂಡ ನಡೆಯಿತು.

ಇದನ್ನೂ ಓದಿ: ‘ನರೇಗಾ’ಗೆ ಪರ್ಯಾಯ VB—G RAM G ಕಾಯ್ದೆಗೆ ರಾಷ್ಟ್ರಪತಿ ಅಂಕಿತ

ಹಳ್ಳಗಳಲ್ಲಿ ಹೂಳು ತೆಗೆದು ಮಳೆಗಾಲದಲ್ಲಿ ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ಸದ್ಬಳಕೆ ಮಾಡಲು ಚೆಕ್ ಡ್ಯಾಂ ನಿರ್ಮಿಸುವ ರೂ. 100 ಕೋಟಿ ವೆಚ್ಚದ ಪೈಲಟ್ ಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳಲ್ಲಿ 67 ಹಳ್ಳಗಳಿಗೆ 206 ಚೆಕ್ ಡ್ಯಾಂ ನಿರ್ಮಿಸಲಾಗುವುದು. ಇದರಿಂದ ಅಂತರ್ಜಲವೂ ಹೆಚ್ಚಾಗಲಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಗುಣದಾಳು ಹಿರೇಮಠದ ಡಾ. ವಿವೇಕಾನಂದ ದೇವರು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಾವಿರಾರು ರೈತರು ಹಾಗೂ ಮಹಿಳೆಯರ ಸಂಭ್ರಮದ ಕಲರವದಿಂದ ತಿಕೋಟಾ ರೈತ ಕ್ಷೇತ್ರೋತ್ಸವ ವಿಶೇಷವಾಗಿತ್ತು.

Previous articleಕೊಲ್ಲೂರು ದೇಗುಲದ ಹೆಸರಿನಲ್ಲಿ ನಕಲಿ ವೆಬ್‌ಸೈಟ್: ಭಕ್ತರ ನಂಬಿಕೆ ದೋಚಿದ ವಂಚಕ ಸೆರೆ