ವಿಜಯಪುರ: ಸಿದ್ದರಾಮಯ್ಯ ಅವರು ಜಾಗ ಬಿಡುವುದು ಅಷ್ಟು ಸುಲಭವಲ್ಲ. ಡಿ.ಕೆ. ಶಿವಕುಮಾರ ಬ್ಲಾಕ್‌ಮೇಲ್ ಹೆಚ್ಚಾಗಿದ್ದರೂ ಅಷ್ಟೇ ಸಿದ್ದರಾಮಯ್ಯರ ಪರ ಬೆಂಬಲವೂ ಅಧಿಕವಾಗುತ್ತಿದೆ. ರಾಜಕಾರಣ ಯಾವ ತಿರುವು ಪಡೆಯುತ್ತದೆಯೋ ಗೊತ್ತಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ. 16ರಂದು ಸಿಹಿ ಸುದ್ದಿ ಸಿಗಲಿದೆ ಎಂದು ಡಿ.ಕೆ. ಶಿವಕುಮಾರ ಬೆಂಬಲಿಗರು ಹೇಳುತ್ತಿದ್ದಾರೆ. ಆದರೆ ಅದು ಸುಲಭದ ಮಾತಲ್ಲ. ರಾಹುಲ್ ಗಾಂಧಿ ಏನು ಹೇಳಿದ್ದಾರೆಂಬುದು ಆ ಪಕ್ಷದ ಆಂತರಿಕ ವಿಷಯವಾಗಿದೆ. ಆದರೆ ಕುರ್ಚಿ ಕಚ್ಚಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಇದಕ್ಕೆಲ್ಲಾ ಕಂಟ್ರೋಲ್ ಮಾಡಬೇಕಿದ್ದ ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ ಎಂದು ಟೀಕಿಸಿದರು.
ಈ ಹಿಂದೆ ವಿರೇಂದ್ರ ಪಾಟೀಲರನ್ನು ವಿಮಾನ ನಿಲ್ದಾಣದಲ್ಲೇ ಅವಮಾನಕಾರಿಯಾಗಿ ಸಿಎಂ ಸ್ಥಾನದಿಂದ ತೆಗೆದಿದ್ದರು. ಅಂತಹ ಶಕ್ತಿ ಈಗಿರೋ ಕಾಂಗ್ರೆಸ್ ಹೈಕಮಾಂಡ್‌ಗೆ ಇಲ್ಲ ಎಂದರು.
ಇದನ್ನೂ ಓದಿ: ಇರಾನ್ ಕರೆನ್ಸಿ ಭಾರೀ ಕುಸಿತ: 1 ಡಾಲರ್ 10,92,500 ರಿಯಾಲ್‌ಗೆ ಸಮ
ಇದೇ ತಿಂಗಳ ಕೊನೆಯಲ್ಲಿ ಮೂರು ದಿನಗಳ ವಿಶೇಷ ಅಧಿವೇಶನದ ಕುರಿತು ಮಾತನಾಡಿದ ಯತ್ನಾಳ, ವಿಶೇಷ ಅಧಿವೇಶನ ಯಾಕೆ ಕರೆಯಲಾಗಿದೆ ಎಂಬ ಮಾಹಿತಿ ನಮಗೆ ಇಲ್ಲ. ನೀರಾವರಿ ಯೋಜನೆಗಳ ವಿಚಾರವಾಗಿ ಕರೆಯಲಾಗಿದೆಯಾ ಅಥವಾ ಬೇರೆ ಕಾರಣಕ್ಕೋ ಗೊತ್ತಿಲ್ಲ. ವಿರೋಧ ಪಕ್ಷದವರಿಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕೊನೆಯ ಅಧೀವೇಶನವೆಂದು ಕರೆಯಲಾಗಿದೆ ಎಂಬ ವಿಚಾರದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ ಯಾವುದನ್ನು ಹೇಳಲಿಕ್ಕೆ ಆಗಲ್ಲ. ಕಾಂಗ್ರೆಸ್ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ ಎಂದರು.























