ವಿಜಯಪುರ: ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಎತ್ತ ನೋಡಿದರೂ ವಿದ್ಯಾರ್ಥಿ – ಯುವಜನ ಶಕ್ತಿ ಗೋಚರಿಸಿತು. ಉದ್ಯೋಗ ಕೊಡಿ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.
ಸಾವಿರಾರು ಉದ್ಯೋಗಗಳು ಖಾಲಿ ಇದ್ದರೂ ನೇಮಕಾತಿ ಪ್ರಕ್ರಿಯೆ ನಡೆಸದ ರಾಜ್ಯ ಸರ್ಕಾರದ ವಿರುದ್ಧ ವಿದ್ಯಾರ್ಥಿ ಸಮುದಾಯ ಪ್ರಬಲ ಆಕ್ರೋಶ ಹೊರಹಾಕಿತು.ಖಾಲಿ ಇರುವ ಹುದ್ದೆ ಭರ್ತಿ ಮಾಡಿ'ಸುಳ್ಳು ಹೇಳಬೇಡಿ – ಉದ್ಯೋಗ ಕೊಡಿ’, `ಯುವಕರ ಕೈಗೆ ಚಿಪ್ಪು’ ಎಂಬ ಸಂದೇಶ ಸಾಂಕೇತಿಕರಿಸಿದ ಅನೇಕ ಸಚಿತ್ರಗಳ ಫಲಕಗಳನ್ನು ಪ್ರದರ್ಶಿಸಿ ನಂತರ ಅವುಗಳನ್ನು ಹರಿದು ಹಾಕುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು. ನಂತರ ಅಲ್ಲಿಂದ ಪ್ರತಿಭಟನಾ ರ‍್ಯಾಲಿಯಲ್ಲಿ ಸಾಗಿದ ವಿದ್ಯಾರ್ಥಿಗಳು ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದರು.
ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ ಸಂಘದ ಅಧ್ಯಕ್ಷ ಕಾಂತರಾಜ್ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳು ಖಾಲಿ ಇದ್ದರೂ ಉದ್ಯೋಗ ಭರ್ತಿ ಮಾಡಿ ಉದ್ಯೋಗ ಒದಗಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ, ಒಂದು ರೀತಿ ಯುವಕರ ಕೈಗೆ ಚಿಪ್ಪು ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ದಿನಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ, ವಯೋಮಿತಿಯನ್ನು ಹೆಚ್ಚಿಸುವುದೇ ಇದಕ್ಕೆ ಪರಿಹಾರವಾಗಿದ್ದು, ಇಲ್ಲವಾದರೆ ಸರ್ಕಾರ ಮಾಡಿದ ತಪ್ಪಿಗೆ ಲಕ್ಷಾಂತರ ಬಡವರು ಉದ್ಯೋಗ ವಂಚಿತರಾಗಬೇಕಾಗುತ್ತದೆ, ಹೀಗಾಗಿ ಸರ್ಕಾರ ಕೂಡಲೇ ವಯೋಮಿತಿ ಹೆಚ್ಚಿಸಿ ನೇಮಕಾತಿಯನ್ನು ಆರಂಭಿಸುವಂತೆ ಆಗ್ರಹಿಸಿದರು.
ಎಸ್‌ಬಿ ವಿಸ್ಡಮ್ ಸಂಸ್ಥೆ ಅಧ್ಯಕ್ಷ ಹಾಗೂ ಹೋರಾಟಗಾರ ಶರಣಯ್ಯ ಬಂಡಾರಿಮಠ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು, ಪೊಲೀಸ್ ಇಲಾಖೆ, ಪಶುಸಂಗೋಪನೆ, ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖವಾದ ಬೇಡಿಕೆಗಳನ್ನು ಮಂಡಿಸಿದ ವಿದ್ಯಾರ್ಥಿಗಳು, ಎಲ್ಲ ಇಲಾಖೆಗಳ ನೇಮಕಾತಿ ವಯೋಮಿತಿಯನ್ನು ಐದು ವರ್ಷಗಳ ಕಾಲ ಹೆಚ್ಚಿಸುವುದು, ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ನಿಗದಿಗೊಳಿಸುವುದು, 3-1, 3-ಬಿ ಕೆಟಗರಿಯಲ್ಲಿರುವ ಅಭ್ಯರ್ಥಿಗಳಿಗೆ ನ್ಯಾಯಸಮ್ಮತವಾಗಿ ರೋಸ್ಟರ್ ಬಿಂದುವನ್ನು ನೇಮಕಾತಿಯಲ್ಲಿ ಅಳವಡಿಸುವುದು, ದೈಹಿಕ ಶಿಕ್ಷಣ ಸೇರಿದಂತೆ ಎಲ್ಲ ವೃಂದದ ಶಿಕ್ಷಕರ ನೇಮಕಾತಿ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ನೇಮಕಾತಿ ಪ್ರಕ್ರಿಯೆಯನ್ನು ಸಮರೋಪಾದಿಯಲ್ಲಿ ಆರಂಭಿಸುವಂತೆ ಆಗ್ರಹಪಡಿಸಿದರು.


























