ಬಿಜಾಪುರ (ಬಬಲೇಶ್ವರ): ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ‘ರೆಡ್ ಬರ್ಡ್ ಏವಿಯೇಷನ್’ಗೆ ಸೇರಿದ ಖಾಸಗಿ ಜೆಟ್ ವಿಮಾನವು ಬಿಜಾಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಹೊಲದಲ್ಲಿ ಅಪಘಾತಕ್ಕೀಡಾಗಿ ಪತನಗೊಂಡ ಘಟನೆ ಮಂಗಳವಾರ ಸಂಭವಿಸಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಕ್ಯಾಪ್ಟನ್ ಕುನಾಲ್ ಮಲ್ಲೋತ್ರಾ ಹಾಗೂ ತರಬೇತಿ ನಿರತ ಪೈಲಟ್ ಗೌತಮ್ ಶಂಕರ್ ಪಿ.ಆರ್. ಅವರು ಗಾಯಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾಹಿತಿ ನೀಡಿದ್ದು, ವಿಮಾನವು ಏಕಾಏಕಿ ತಲೆ ಕೆಳಗಾಗಿ ನೆಲಕ್ಕೆ ಉರುಳಿ ಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ ಇಬ್ಬರೂ ಪೈಲಟ್‌ಗಳು ವಿಮಾನದಿಂದ ಜಿಗಿದು ಜೀವಾಪಾಯದಿಂದ ಪಾರಾಗಿದ್ದಾರೆ. ಆದರೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು–ವಿಜಯಪುರ ವಂದೇ ಭಾರತ್, ಹೈಸ್ಪೀಡ್ ಕಾರಿಡಾರ್‌ಗೆ ಎಂ.ಬಿ. ಪಾಟೀಲ್ ಮನವಿ
ಸ್ಥಳದಲ್ಲಿ ಜನಸಂದಣಿ: ವಿಮಾನ ಪತನಗೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಸ್ಥಳಕ್ಕೆ ಧಾವಿಸಿದ್ದು, ಅಪಘಾತದ ದೃಶ್ಯವನ್ನು ವೀಕ್ಷಿಸಲು ಜನಸಂದಣಿ ಉಂಟಾಯಿತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಜನರನ್ನು ನಿಯಂತ್ರಿಸಿ, ಭದ್ರತೆ ಒದಗಿಸಿದರು.
ಪೊಲೀಸ್ ಪರಿಶೀಲನೆ: ಘಟನೆಯು ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಮಾನ ಪತನಕ್ಕೆ ನಿಖರ ಕಾರಣ ತಿಳಿಯಲು ತಾಂತ್ರಿಕ ತಜ್ಞರ ಸಹಾಯದಿಂದ ತನಿಖೆ ಆರಂಭಿಸಲಾಗಿದೆ.
ಇದನ್ನೂ ಓದಿ: ಮೀಟರ್ ಹೆಚ್ಚಾದರೆ ಮೋದಿ – ದರ ಹೆಚ್ಚಾದರೆ ರಾಜ್ಯ ಕಾರಣ: ಇದು ಬಿಜೆಪಿ ಲಾಜಿಕ್
ಅಪಘಾತದಲ್ಲಿ ವಿಮಾನ ಸಂಪೂರ್ಣವಾಗಿ ಹಾನಿಗೊಂಡಿದ್ದರೂ, ಪೈಲಟ್‌ಗಳು ಸಮಯಪ್ರಜ್ಞೆ ಪ್ರದರ್ಶಿಸಿ ವಿಮಾನದಿಂದ ಜಿಗಿದು ಪಾರಾದುದು ದೊಡ್ಡ ನಿಟ್ಟುಸಿರು ತಂದಿದೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.























