Home ನಮ್ಮ ಜಿಲ್ಲೆ ವಿಜಯಪುರ ಇಂಗಳೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವ ಮಹಾಸ್ವಾಮೀಜಿ ಲಿಂಗೈಕ್ಯ

ಇಂಗಳೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವ ಮಹಾಸ್ವಾಮೀಜಿ ಲಿಂಗೈಕ್ಯ

0
33

ನಡೆದಾಡುವ ಬಸವೇಶ್ವರ ಬಸವೈಕ್ಯ ಬಸವ ತತ್ವದ ಮಹಾನ್ ಪ್ರಚಾರಕರಿಗೆ ಅಂತಿಮ ನಮನ

ಬಸವನಬಾಗೇವಾಡಿ: ತಾಲೂಕಿ‌ನ ಇಂಗಳೇಶ್ವರ ಗ್ರಾಮದ ಪಾದಯಾತ್ರೆ ಮೂಲಕವೇ ಇಡೀ ಭರತಖಂಡ ಸುತ್ತಿ ನಡೆದಾಡುವ ಬಸವೇಶ್ವರ ಎಂದೇ ಖ್ಯಾತರಾಗಿದ್ದ ಇಂಗಳೇಶ್ವರ ವಚನಶಿಲಾ ಮಂಟಪದ ನಿರ್ಮಾತೃಗಳೂ ಆಗಿದ್ದ ವಿರಕ್ತಮಠದ ಪೀಠಾಧಿಪತಿ ಚನಬಸವ ಶ್ರೀಗಳು ತಮ್ಮ 95 ನೇ ವಯಸ್ಸಿನಲ್ಲಿ ಬಸವೈಕ್ಯರಾಗಿದ್ದಾರೆ.

1932 ರಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯ ಬಿಳಗಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಹುಚ್ಚಮ್ಮ ಹಾಗೂ ವೀರಯ್ಯ ಎಂಬ ಪುಣ್ಯ ದಂಪತಿಗಳ ಉದರದಲ್ಲಿ ಚನ್ನಬಸವ ಶ್ರೀಗಳು ಜನಿಸಿದ್ದರು. ಬಾಗಲಕೋಟೆಯ ಟೀಕಿನಮಠ ಹಾಗೂ ಧಾರವಾಡ ಮುರುಘಾ ಮಠದಲ್ಲಿ ಗುರುಕುಲ ಪದ್ಧತಿಯಲ್ಲಿ ಮೃತ್ಯುಂಜಯ ಶ್ರೀಗಳ ಸೇವೆಯೊಂದಿಗೆ ಸಂಸ್ಕೃತದಲ್ಲಿ ಶಿಕ್ಷಣ ಪಡೆದು, ಭಾಷಾ ಪಾಂಡಿತ್ಯ ಪಡೆದಿದ್ದರು.

ಈ ಹಂತದಲ್ಲೇ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ತಮ್ಮ ಉತ್ತರಾಧಿಕಾರಿ ಶೋದದಲ್ಲಿದ್ದಾಗ ಚನ್ನಬಸವ ಶ್ರೀಗಳು ಕಣ್ಣಿಗೆ ಬೀಳುತ್ತಾರೆ. ಚನ್ನಬಸವ ಶ್ರೀಗಳಲ್ಲಿನ ವಿದ್ವತ್ಪೂರ್ಣ ಜ್ಞಾನ, ವಿಶೇಷವಾಗಿ ಬಸವಾದಿ ಶರಣರ ವಚನಗಳ ವಿಶ್ಲೇಷಣೆ, ಬಸವ ಸಿದ್ಧಾಂತದಲ್ಲಿನ ಬದ್ಧತೆ, ಶರಣ ಪರಂಪರೆಯ ಪ್ರಸಾರದ ಕಟಿಬದ್ಧತೆ ಅರಿತ ಸಿದ್ಧಲಿಂಗ ಶ್ರೀಗಳು ತಮ್ಮ ಉತ್ತರಾಧಿಕಾರಿ ಚನ್ನಬಸವ ಶ್ರೀಗಳೇ ಎಂದು ನಿರ್ಧರಿಸುತ್ತಾರೆ.

ಪರಿಣಾಮ ತಮ್ಮ ಅಂತರಂಗದ ಶ್ರೀಗಳೊಂದಿಗೆ ಚರ್ಚಿಸಿ,1948 ರಲ್ಲಿ ಪೀಠಾಧಿಕಾರಿಯಾಗಿ ನಿಯೋಜಿಸುತ್ತಾರೆ. ಬಳಿಕ ಮುದ್ದೇಬಿಹಾಳದ ಖಾಸ್ಗತೇಶ್ವರ ಮಠದ ಗುರುಗಳಿಂದ ತಮ್ಮ 16ನೇ ವಯಸ್ಸಿನಲ್ಲಿ ಪಟ್ಟಾಧಿಕಾರದ ದೀಕ್ಷೆ ಪಡೆಯುತ್ತಾರೆ. ದೀಕ್ಷೆಯ ಬಳಿಕ ತಮ್ಮ ಗುರುಗಳ ಆಶಯದಂತೆ ಬಸವತತ್ವ ಪ್ರಸಾರಕ್ಕೆ ತಮ್ಮನ್ನು ಮುಡಿಪಾಗಿ ಇರಿಸಿಕೊಂಡ ಶ್ರೀಗಳು ಇಂಗಳೇಶ್ವರ ವಿರಕ್ತ ಶ್ರೀ ಮಠದಲ್ಲಿ ಸಜ್ಜಕ-ತುಪ್ಪದ‌ ನಿತ್ಯ ದಾಸೋಹಕ್ಕೆ ಚಾಲನೆ ನೀಡಿದ್ದು, ಇಂದಿಗೂ ಮುಂದುವರೆದಿದೆ.

ಸಂಚಾರಿ ಬಸವ : ದೀಕ್ಷೆಯ ಬಳಿಕ ಮಠದಲ್ಲಿ ಕುಳಿತುಕೊಳ್ಳದ ಚನ್ನಬಸವ ಶ್ರೀಗಳು, ಬಸವ ತತ್ವ ಪ್ರಸಾರಕ್ಕಾಗಿ ಪಾದಯಾತ್ರೆಯ ಮೂಲಕ ಅಖಂಡ ಭಾರತವನ್ನು ಸುತ್ತಲು ಆರಂಭಿಸುತ್ತಾರೆ. ಪೀಠಾಧಿಪತಿಗಳಾದ ಮೂರೇ ವರ್ಷಕ್ಕೆ ಅಂದರೆ 1951 ರಲ್ಲಿ ಮೊಟ್ಟಮೊದಲ ಬಾರಿಗೆ ಇಂಗಳೇಶ್ವರ ಗ್ರಾಮದಿಂದ ಅಥಣಿಗೆ ಪಾದಯಾತ್ರೆ ಆರಂಭಿಸಿದ್ದ ಶ್ರೀಗಳು, 2018 ರಲ್ಲಿ ಎರಡನೇ ಬಾರಿಗೆ ಸಿದ್ಧಲಿಂಗೇಶ್ವರರ ಪುಣ್ಯಕ್ಷೇತ್ರವಾದ ಯಡಿಯೂರಿಗೆ ಪಾದಯಾತ್ರೆ ನಡೆಸಿದ್ದಾರೆ. ಸುದೀರ್ಘ ಸುಮಾರು ಏಳು ದಶಕಗಳ ಅವಧಿಯಲ್ಲಿ 37 ಬಾರಿ ಭಾರತದ ವಿವಿಧ ಧರ್ಮ ಕ್ಷೇತ್ರಗಳಿಗೆ ಪಾದಯಾತ್ರೆ ನಡೆಸಿದ್ದರು.

ಇದಲ್ಲದೇ ವಚನ ಸಂರಕ್ಷಕ ಧೀರ ಶರಣ ಚನ್ನಬಸವಣ್ಣನ‌ ಜನ್ಮಭೂಮಿ ಇಂಗಳೇಶ್ವರ ಕ್ಷೇತ್ರದಿಂದ ಐಕ್ಯಸ್ಥಳವಾದ ಉಳುವಿ ಕ್ಷೇತ್ರದ ವರೆಗೆ 32 ವರ್ಷಗಳ ವರೆಗೆ ಸತತವಾಗಿ ಪಾದಯಾತ್ರೆ ನಡೆಸಿದ್ದರು.

ಭಾರತದಾದ್ಯಂತ ಬಸವ ತತ್ವ ಬಿತ್ತುವುದುಕ್ಕಾಗಿ ವಾರಣಾಸಿಯ ವಿಶ್ವನಾಥ, ಕೇದಾರನಾಥ, ರಾಮೇಶ್ವರ ಸೇರಿದಂತೆ ನೂರಾರು ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ದರ್ಶಿಸಿದ್ದರು.

ಈ ಅವಧಿಯಲ್ಲಿ ಕೇದಾರನಾಥ ಪಾದಯಾತ್ರೆ ಮುಗಿಸಿ ಮರಳುವಾಗ ಋಷಿಕೇಶದ ಪಾರಮಾರ್ಥ ಆಶ್ರಮದಲ್ಲಿ ತಂಗಿದ್ದರು. ಆಶ್ತಮದ ಗೋಡೆಗಳ ಮೇಲೆ ಭಗವದ್ಗೀತೆಯ ಸಾರವನ್ನು ವಿಸ್ತಾರವಾಗಿ ಬರೆದುದದನ್ನು ಗಮನಿಸಿದ ಶ್ರೀಗಳು ಬಸವಾದಿ ಶರಣರ ವಚನಗಳನ್ನು ಇದೇ ಮಾದರಿಯನ್ನು ರೂಪಿಸಲು ಯೋಚಿಸಿದ್ದರು.

ಇಂಗಳೇಶ್ವರ ಮಠಕ್ಕೆ ಮರಳುವ ಹಂತದಲ್ಲಿ ಶ್ರೀಗಳ ಮನದಲ್ಲಿ ಮಂಕಾಗಿ, ಅಳಿಸಿಹೋಗುವ ಗೋಡೆ ಬರಹದ ಬದಲಾಗಿ ಸುಲಭವಾಗಿ ಅಳಿಸಲಾಗದ ಶಿಲೆಗಳಲ್ಲಿ ಅದರಲ್ಲೂ ಪ್ರತಿಬಿಂಬಿ ಶಿಲೆಗಳಲ್ಲಿ ವಚನಗಳನ್ನು ಕೆತ್ತಿಸಿ, ಅದರಿಂದಲೇ ಮಂಟಪ ನಿರ್ಮಿಸಲು ಮುಂದಾದರು.

ಐತಿಹಾಸಿಕ ಅರ್ಧ ಶತಮಾನ: ವಚನ ಶಿಲಾ ಮಂಟಪ ನಿರ್ಮಾಣದ ದಿಟ್ಟ ಸಂಕಲ್ಪ ಮಾಡಿದ ಚನ್ನಬಸವ ಶ್ರೀಗಳು,1972 ರಲ್ಲಿ ವಚನಶಿಲಾ ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇಸಿದ್ದರು. ಜಗದ್ವಿಖ್ಯಾತಿ ಪಡೆಯಲಿರುವ ವಚನಶಿಲಾ ಮಂಟಪದ ಐತಿಹಾಸಿಕ ದೂರಗಾಮಿ ಯೋಜನೆ ಅನುಷ್ಠಾನಕ್ಕಾಗಿ ಜೋಳಿಗೆ ಹಿಡಿದ ಶ್ರೀಗಳಿಗೆ ಆರಂಭದಲ್ಲಿ ಉತ್ತಮ ಸ್ಪಂದನೆ ಸಿಗಲಿಲ್ಲ. ಆದರೆ ಬಸವೇಶ್ವರರ ಇಚ್ಛಾಶಕ್ತಿ, ಚನ್ನಬಸಣ್ಣನ ಧೀರತನ ಸೇರಿದಂತೆ ಬಸವಾದಿ ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಚನ್ನಬಸವ ಶ್ರೀಗಳು ಅಧೀರರಾಗದೇ ಸುದೀರ್ಘ ಅರ್ಧ ಶತಮಾನದ ಪರಿಶ್ರಮದಿಂದ ತಮ್ಮ ಪರಿಕಲ್ಪನೆಯ ವಚನ ಶಿಲಾ ಮಂಟಪ ನಿರ್ಮಿಸಿಯೇ ದೈಹಿಕವಾಗಿ ನಿಗರ್ಮಿಸಿದ್ದಾರೆ.

ಪೂರ್ಣಗೊಂಡಿದ್ದ ವಚನ ಶಿಲಾಮಂಟಪವನ್ನು ರಾಷ್ಟ್ರಪತಿ ಪ್ರಣವ ಮುಖರ್ಜಿ ಅವರಿಂದ ಲೋಕಾರ್ಪಣೆ ಗೊಳಿಸಬೇಕೆಂಬ ಹಂಬಲವಿತ್ತು. ಹಲವು ಕಾರಣಗಳಿಂದ ಸಾಧ್ಯವಾಗದಿದ್ದಾಗ, ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರಿಂದ 2022 ರಲ್ಲಿ ಲೋಕಾರ್ಪಣೆ ಆಗಿತ್ತು.

ಷಟ್ ಕೋನದಲ್ಲಿ 1700 ವಚನಗಳ ಶಿಲಾ ಮಂಟಪ: ಇಂಗಳೇಶ್ವರದಲ್ಲಿ ಷಟ್ ಕೋನಗಳಲ್ಲಿ ನಿರ್ಮಾಣಗೊಂಡದ್ದು, ವಚನ ಶಿಲಾ ಮಂಟಪ 1700 ವಚನಗಳನ್ನು ಶಿಲೆಗಳಲ್ಲಿ ಕೆತ್ತಿ ರೂಪಿಸಲಾಗಿದೆ. ಇದರಲ್ಲಿ ಬಸವೇಶ್ವರರು ರಚಿಸಿದ 1300 ವಚನಗಳನ್ನು ಕೆತ್ತಲಾಗಿದೆ. ಉಳಿದಂತೆ ಚೆನ್ನಬಸವಣ್ಣ, ಅಲ್ಲಮ ಪ್ರಭುದೇವರು, ಸಿದ್ದರಾಮೇಶ್ವರರು ಹಾಗೂ ಅಕ್ಕಮಹಾದೇವಿ ಇವರ ವಚನಗಳನ್ನು ಕೆತ್ತಲಾಗಿದೆ. ಚನ್ನಬಸವಣ್ಣನವರ ಕರಣ ಹಸಿಗೆ ಗ್ರಂಥವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ರಾಜ್ಯದ ಕೆಲವೇ ಮಠಾಧೀಶರಲ್ಲಿ ಇವರು ಪ್ರಮುಖರಾಗಿದ್ದರು.

ಚಾಮರಸನ ಪ್ರಭುಲಿಂಗ ಲೀಲೆ ಗ್ರಂಥವನ್ನು ಕರಗತ ಮಾಡಿಕೊಂಡಿದ್ದರು. ಅಲ್ಲಮಪ್ರಭುಗಳ ವಚನಗಳು ವಿಶ್ಲೇಷಣೆ ಮಾಡುವುದರಲ್ಲಿ ಇವರು ಎತ್ತಿದ ಕೈ. ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಾಡಿನ ಖ್ಯಾತ ಸಾಹಿತಿಗಳಾದ ಡಾಕ್ಟರ್ ಸೋಮನಾಥ ಯಲವಾರ ಅವರ ಸಂಪಾದಕತ್ವದಲ್ಲಿ ನಿರಂಜನ ಜ್ಯೋತಿ ಎನ್ನುವ ಅಭಿನಂದನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶ್ರದ್ಧಾಂಜಲಿ: ಲಿಂಗೈಕ್ಯವಾದ ವಿಷಯ ತಿಳಿದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ದುಃಖವಾಯಿತು. ಇಂಗಳೇಶ್ವರದ ವಚನ ಶಿಲಾಶಾಸನ ಮಂಟಪದಲ್ಲಿ ಕಲ್ಲುಗಳ ಮೇಲೆ ವಚನಗಳನ್ನು ಕೆತ್ತಿಸಿ ಶರಣರ ಪರಂಪರೆ ಮತ್ತು ವಿಚಾರಧಾರೆಯನ್ನು ಜನರಿಗೆ ತಲುಪಿಸಿದ ಮಹೋನ್ನತ ಸೇವೆ ಅವರು ಮಾಡುತ್ತಿದ್ದರು. ಶ್ರೀಗಳ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಭಕ್ತರು ನೋವು ಭರಿಸುವ ಶಕ್ತಿ ಹೊಂದಲಿ ಎಂದಿದ್ದಾರೆ.

ಭಕ್ತಾದಿಗಳಲ್ಲಿ ಶೋಕಸಂತಾಪ: ಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನಕ್ಕಾಗಿ ಆಗಮಿಸುವ ನಿರೀಕ್ಷೆಯಿದೆ. ಶ್ರೀಗಳ ಅಂತಿಮ ವಿಧಿ ವಿಧಾನಗಳ ಬಗ್ಗೆ ಮಠವು ಶೀಘ್ರದಲ್ಲೇ ಮಾಹಿತಿ ನೀಡಲಿದೆ.