ವಿಜಯಪುರ: ನಡೆದಾಡುವ ದೇವರು, ಜಗತ್ತಿಗೆ ಜ್ಞಾನದ ಬೆಳಕನ್ನು ಹರಿಸಿದ ಶ್ರೀ ಸಿದ್ಧೇಶ್ವರ ಅಪ್ಪಗಳ ಗುರುನಮನ ಕಾರ್ಯಕ್ರಮವು ಅತ್ಯಂತ ಶ್ರದ್ಧೆ – ಭಕ್ತಿಯಿಂದ ನೆರವೇರಿತು.
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಶುಕ್ರವಾರ ಬೆಳಗ್ಗೆ 6ಕ್ಕೆ ಜಪಯಜ್ಞ ಜರುಗಿತು. ಜಪಯಜ್ಞದಲ್ಲಿ ಸಾವಿರಾರು ಭಕ್ತರು, ಪೂಜ್ಯರು ಭಾಗವಹಿಸಿ ಭಕ್ತಿಯ ನಮನಗಳನ್ನು ಸಲ್ಲಿಸಿದರು.
ನಂತರ 7ಗಂಟೆಗೆ ಪ್ರಣವ ಮಂಟಪದ ಮುಂಭಾಗದಲ್ಲಿರುವ ವೈವಿಧ್ಯಮಯ ಸುಂದರ ಹೂವುಗಳಿಂದ ಅಲಂಕೃತಗೊಂಡಿರುವ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಫನಮನ ಸಲ್ಲಿಸಲಾಯಿತು. ನಂತರ 8ಗಂಟೆಗೆ ಪ್ರಣವ ಮಂಟಪದಲ್ಲಿರುವ ಶ್ರೀ ಮಲ್ಲಕಾರ್ಜುನ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಾಡಿನ ಶರಣರು, ಸಂತರು, ಪೂಜ್ಯರು ಭಕ್ತಿಯಿಂದ ಶ್ರೀ ಸಿದ್ಧೇಶ್ವರ ಅಪ್ಪಗಳಿಗೆ ಗುರುನಮನಗಳನ್ನು ಸಲ್ಲಿಸಿ ಶ್ರೀಗಳ ಕೃಪಾಶೀರ್ವಾದಕ್ಕೆ ಪಾತ್ರರಾದರು. ಬೆಳಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಸೇರಿದಂತೆ ಅನೇಕ ಸಾಧಕ ಪೂಜ್ಯರು ಹಾಗೂ ಗಣ್ಯರು ತಮ್ಮ ನುಡಿನಮನಗಳನ್ನು ಸಲ್ಲಿಸಿದರು.
ನಂತರ ಮಧ್ಯಾಹ್ನ 2 ಗಂಟೆಗೆ ಗೀತನಮನದಲ್ಲಿ ಹಲವಾರು ಕಲಾವಿದರು, ಭಕ್ತರು ಸುಮಧುರ ಹಾಡುಗಳ ಮೂಲಕ ಶ್ರೀ ಸಿದ್ಧೇಶ್ವರ ಸ್ವಾಮಿಗಳಿಗೆ ಗುರುನಮನ ಸಲ್ಲಿಸಿದರು. ನಂತರ ಸಂಜೆ 5ಕ್ಕೆ ಧರ್ಮ ಧ್ವಜವನ್ನು ಅವರೋಹಣಗೊಳಿಸುವುದರ ಮೂಲಕ ಗುರುನಮನ ಮಹೋತ್ಸವ ಸಂಪನ್ನಗೊಂಡಿತು.























