ವಿಜಯಪುರ: ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಬಾರೆ ಹಣ್ಣು ಬಸವನಾಡಿನ ರೈತನೊಬ್ಬರ ಬದುಕಿಗೆ ಹೊಸ ದಿಕ್ಕು ನೀಡಿದ್ದು, ಕಡಿಮೆ ವೆಚ್ಚದಲ್ಲಿ ಉತ್ತಮ ಲಾಭ ಗಳಿಸಬಹುದಾದ ಬೆಳೆಯಾಗಿ ಗಮನ ಸೆಳೆಯುತ್ತಿದೆ. ನಾಗಠಾಣ ತಾಲೂಕಿನ ಹಡಗಲಿ ಗ್ರಾಮದ ಪ್ರಗತಿಪರ ರೈತ ಸಂತೋಷ್ ಶ್ರೀಶೈಲ ಹತರಕಿ ಅವರು ತಮ್ಮ 2.5 ಎಕರೆ ಜಮೀನಿನಲ್ಲಿ ಬಾರೆ ಹಣ್ಣು ಬೆಳಸಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುವುದು ಇತರ ರೈತರಿಗೆ ಪ್ರೇರಣೆಯಾಗಿದೆ.
ಈ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ. ಸಂತೋಷ್ ಹತರಕಿ ಅವರು ಬೆಳೆದ ಬಾರೆ ಹಣ್ಣನ್ನು ಕೆ.ಜಿ.ಗೆ ₹42ರಂತೆ ಮಾರಾಟ ಮಾಡಿ ಸುಮಾರು ₹3 ಲಕ್ಷ ಆದಾಯ ಗಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರತೀಯ ಅಂತರಿಕ್ಷ ನಿಲ್ದಾಣಕ್ಕೆ ಶತಪ್ರಯತ್ನ
ವಾರ್ಷಿಕವಾಗಿ ₹40–50 ಲಕ್ಷ ಆದಾಯ: ಸಂತೋಷ್ ಹತರಕಿ ಅವರು ಕೇವಲ ಬಾರೆ ಹಣ್ಣಿನಷ್ಟೇ ಅಲ್ಲದೆ, ತಮ್ಮ ಉಳಿದ ಜಮೀನಿನಲ್ಲಿ ವಿವಿಧ ಕೃಷಿ ಹಾಗೂ ತೋಟಗಾರಿಕಾ ಚಟುವಟಿಕೆಗಳ ಮೂಲಕ ವಾರ್ಷಿಕವಾಗಿ ₹40–50 ಲಕ್ಷದವರೆಗೆ ಆದಾಯ ಗಳಿಸುತ್ತಿರುವುದಾಗಿ ಹೆಮ್ಮೆಯಿಂದ ತಿಳಿಸಿರುವುದಾಗಿ ಎಂ.ಬಿ. ಪಾಟೀಲ ಹೇಳಿದ್ದಾರೆ.
ನೀರಾವರಿ ಯೋಜನೆಗಳೇ ಯಶಸ್ಸಿನ ಮೂಲ: ತಮ್ಮ ಕೃಷಿ ಯಶಸ್ಸಿಗೆ ಸರ್ಕಾರದ ನೀರಾವರಿ ಯೋಜನೆಗಳೇ ಪ್ರಮುಖ ಕಾರಣ ಎಂದು ರೈತ ಸಂತೋಷ್ ಹತರಕಿ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದು, ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ನೀರಾವರಿ ಯೋಜನೆಗಳು ಕೃಷಿ ಮತ್ತು ತೋಟಗಾರಿಕೆಗೆ ವರದಾನವಾಗಿವೆ ಎಂದು ಸಚಿವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ʼರಕ್ಕಸಪುರ’ದಿಂದ ಬಂದ ʼನೀನಾ… ನೀನೇನಾʼ ಮೆಲೋಡಿ ಹಾಡು
ಈ ಸಂದರ್ಭದಲ್ಲಿ ಸಂತೋಷ್ ಹತರಕಿ ಅವರು ತಾವು ಬೆಳೆದ ಬಾರೆ ಹಣ್ಣುಗಳನ್ನು ಸಚಿವರಿಗೆ ಉಡುಗೊರೆಯಾಗಿ ನೀಡಿದ್ದು, ಅವರ ಪ್ರೀತಿ ಹಾಗೂ ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದು ಎಂ.ಬಿ. ಪಾಟೀಲ ಅವರು ಪ್ರತಿಕ್ರಿಯಿಸಿದ್ದಾರೆ.
ಬಾರೆ ಹಣ್ಣು ಬೆಳೆಯುವ ಮೂಲಕ ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ಸಾಧ್ಯ ಎಂಬುದಕ್ಕೆ ಈ ರೈತನ ಸಾಧನೆ ಸ್ಪಷ್ಟ ಉದಾಹರಣೆಯಾಗಿದ್ದು, ಬಸವನಾಡಿನ ರೈತರಿಗೆ ಮಾತ್ರವಲ್ಲ, ರಾಜ್ಯದಾದ್ಯಂತದ ರೈತರಿಗೆ ಇದು ಮಾದರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.























