ರಾಜ್ಯದಲ್ಲಿ Detect–Delete–Deport ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದ ಯತ್ನಾಳ
ಬೆಂಗಳೂರು/ವಿಜಯಪುರ: ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ಕರ್ನಾಟಕ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ನಿವಾಸಿಗಳ ತವರೂರಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಸುದೀರ್ಘ ಪೋಸ್ಟ್ ಪ್ರಕಟಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದೆಲ್ಲೆಡೆ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳು ನೆಲೆಸಿರುವುದಲ್ಲದೆ, ಆಧಾರ್ ಕಾರ್ಡ್ ಸೇರಿದಂತೆ ಹಲವು ಗುರುತಿನ ಚೀಟಿಗಳನ್ನು ಪಡೆದು, ಸ್ಥಳೀಯ ಭಾರತೀಯ ನಾಗರಿಕರಿಗೆ ಸೇರಬೇಕಾದ ಸಂಪನ್ಮೂಲಗಳನ್ನು ಬಳಸುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಯತ್ನಾಳ ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಂಘರ್ಷ ರಹಿತ ರಾಜ್ಯಪಾಲರ ನಡೆ: ಗಣರಾಜ್ಯ ಭಾಷಣ ನಿರಾಳ
ಭದ್ರತೆಗೆ ಅಪಾಯ ಎಂಬ ಆರೋಪ: ಅಕ್ರಮವಾಗಿ ಇಲ್ಲಿಯೇ ದುಡಿಯುವ ಹಣವನ್ನು ಬಾಂಗ್ಲಾದೇಶಕ್ಕೆ ರವಾನಿಸಲಾಗುತ್ತಿದ್ದು, ಇದರ ಮೂಲಕ ಭಾರತವನ್ನು ಅಭದ್ರಗೊಳಿಸುವ ಉಗ್ರ ಸಂಘಟನೆಗಳಿಗೆ ಪರೋಕ್ಷ ನೆರವು ಒದಗಿಸಲಾಗುತ್ತಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಅಕ್ರಮ ವಾಸ: ಕಾಫಿ ತೋಟಗಳು, ತ್ಯಾಜ್ಯ ನಿರ್ವಹಣಾ ಘಟಕಗಳು, ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸ, ಚಾಲಕ, ಚಿಂದಿ ಆಯುವ ಕೆಲಸ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಭಾರತವನ್ನೇ ತಮ್ಮ ಶಾಶ್ವತ ನೆಲೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಯತ್ನಾಳ ಆರೋಪಿಸಿದ್ದಾರೆ.
ಇದನ್ನೂ ಓದಿ: ಪುಸ್ತಕಗಳ ಮೂಲಕ ಜ್ಞಾನ ಕ್ರಾಂತಿ: ಅಂಕೇಗೌಡರಿಗೆ ‘ಪದ್ಮಶ್ರೀ’ ಗರಿ
ಈ ವಿಚಾರವನ್ನು ಮಾಧ್ಯಮಗಳು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರು ಬಯಲಿಗೆಳೆದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಸರ್ಕಾರದ ನಿಲುವಿನ ವಿರುದ್ಧ ಟೀಕೆ: ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ, ಅಕ್ರಮ ಬಾಂಗ್ಲಾದೇಶಿ ನಿವಾಸಿಗಳನ್ನು ಪತ್ತೆಹಚ್ಚಿ ಮಾಹಿತಿ ನೀಡಿದ ಮಾಧ್ಯಮಗಳು ಹಾಗೂ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರ ಪರೋಕ್ಷವಾಗಿ ಅಕ್ರಮ ವಾಸಿಗಳ ಪರ ನಿಂತಿರುವಂತೆ ಕಾಣುತ್ತಿದೆ ಎಂದು ಯತ್ನಾಳ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವೀರರಾಣಿ ಚನ್ನಮ್ಮ ಮೂರ್ತಿ ರಕ್ಷಣೆ ಭವಿಷ್ಯ ಡೋಲಾಯಮಾನ
ಕೇಂದ್ರ ಗೃಹ ಸಚಿವರಿಗೆ ಪತ್ರ: ರಾಜ್ಯದಲ್ಲಿರುವ ಪ್ರತಿಯೊಬ್ಬ ಅಕ್ರಮ ಬಾಂಗ್ಲಾದೇಶೀಯರನ್ನು SIR ಮಾದರಿಯ Detect, Delete & Deport (ಪತ್ತೆ, ದಾಖಲೆ ಅಳಿಕೆ ಮತ್ತು ಗಡಿಪಾರು) ಕ್ರಮದಡಿ ಗುರುತಿಸಿ, ಅವರ ದೇಶಕ್ಕೆ ಗಡಿಪಾರು ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸವಿವರ ಪತ್ರ ಬರೆದಿದ್ದೇನೆ ಎಂದು ಯತ್ನಾಳ ತಿಳಿಸಿದ್ದಾರೆ.
ದೇಶದ ಐಕ್ಯತೆ, ಒಗ್ಗಟ್ಟು ಮತ್ತು ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಅಕ್ರಮ ಬಾಂಗ್ಲಾದೇಶಿ ನಿವಾಸಿಗಳನ್ನು ಕೂಡಲೇ ಗಡಿಪಾರುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮಾನ್ಯ ಗೃಹ ಸಚಿವರಿಗೆ ಮನವಿ ಮಾಡಿರುವುದಾಗಿ ಅವರು ಹೇಳಿದ್ದಾರೆ.























