ವಿಜಯನಗರ(ಮರಿಯಮ್ಮನಹಳ್ಳಿ): ವೈದ್ಯಾಧಿಕಾರಿಯ ಕಿರುಕುಳಕ್ಕೆ ಮನನೊಂದ ನರ್ಸ್ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಸುನೀತಾ, ಗುರುವಾರ ಬೆಳಗಿನ ಜಾವ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ವಿನೋದ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಪಟ್ಟಣದ ಸಾರ್ವಜನಿಕರು ಮನವಿ ಸಲ್ಲಿಸಿ, ವೈದ್ಯಾಧಿಕಾರಿ ಮಂಜುಳಾರನ್ನು ವರ್ಗಾಯಿಸಲು ಆಗ್ರಹಿಸಿದರು.
ಡಾ. ಮಂಜುಳಾ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸ್ಪಂದಿಸುವುದಿಲ್ಲ. ರೋಗಿಗಳೊಂದಿಗೆ ಒರಟಾಗಿ ವರ್ತಿಸುತ್ತಾರೆ. ಇವರ ವಿರುದ್ಧ ಅನೇಕ ಬಾರಿ ದೂರು ನೀಡಿದರೂ, ಆರೋಗ್ಯ ಇಲಾಖೆಯ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಶಾಸಕರು ಕೂಡ ಕ್ರಮಕ್ಕೆ ಮುಂದಾಗಿಲ್ಲ ಎಂದು ಜನರು ದೂರಿದರು.
ಈ ಹಿಂದೆ ಕೂಡ ಪಟ್ಟಣದ ಯುವಕನೋರ್ವನಿಗೆ ಚಿಕಿತ್ಸೆ ನೀಡುವಲ್ಲಿ ವಿಫಲರಾಗಿ ಯುವಕನ ಸಾವಿಗೆ ಕಾರಣರಾಗಿದ್ದರು. ಆಗಲೇ ಇವರನ್ನು ಕೂಡಲೇ ಅಮಾನತುಗೊಳಿಸಲು ಒತ್ತಾಯಿಸಲಾಗಿತ್ತು. ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇಲ್ಲಿಯೇ ಅವರನ್ನು ಮುಂದುವರಿಸಿತು ಎಂದು ದೂರಲಾಗಿದೆ.























