ದಾಂಡೇಲಿ(ಉತ್ತರ ಕನ್ನಡ): ಕಾರವಾರ ತಾಲೂಕಿನ ಕದ್ರಾದ ಯುವತಿ ರಿಶೇಲ್ ಡಿಸೋಜಾಳ ಶವದ ಪೋಸ್ಟ್‌ಮಾರ್ಟಂ ತರಾತುರಿಯಲ್ಲಿ ಆಗಿದೆ. ಸಂಶಯಾಸ್ಪದ ಆತ್ಮಹತ್ಯೆ, ಪೋಕ್ಸೋ, ಕೊಲೆ ಪ್ರಕರಣಗಳನ್ನು ರಾತ್ರಿ ಸಮಯ ಪೋಸ್ಟ್‌ಮಾರ್ಟಂ ಮಾಡಬಾರದು ಎಂಬ ನಿಯಮ ಇದ್ದರೂ, ಎರಡು ತಾಸಿನಲ್ಲಿ ಪೋಸ್ಟ್ ಮಾರ್ಟಂ ಆಗಿದೆ ಎಂದು ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಶಾಂತ ಜತ್ತಣ್ಣ ಅಪಾದಿಸಿದ್ದಾರೆ.
ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಶೇಲ್ ಡಿಸೋಜಾ ಪೋಸ್ಟ್‌ಮಾರ್ಟಂಗೆ ಮುನ್ನ ಆಸ್ಪತ್ರೆಯ ಬಳಿ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸ್ಥಳಕ್ಕೆ ಬಂದಿದ್ದಾರೆ. ರಿಶೇಲ್ ಕುಟುಂಬದ ಸದಸ್ಯನನ್ನು ಪ್ರಶ್ನೆ ಸಹ ಮಾಡಿದ್ದಾರೆ. ಪೋಸ್ಟ್‌ಮಾರ್ಟಂ ಸಮಯದಲ್ಲಿ ಹಲವು ಪ್ರಶ್ನೆ ಕೇಳಿದ್ದಾರೆ. ಇದು ಯಾಕೆ ಆಯಿತು? ಎಂದು ಪೊಲೀಸರು ತನಿಖೆ ಮಾಡಿಲ್ಲ ಎಂದರು.
ರಿಶೇಲ್ ಡಿಸೋಜಾ ಸಾವನ್ನಪ್ಪಿ 14 ದಿನಗಳು ಮುಗಿದರೂ, ಆರೋಪಿಗಳನ್ನು ಬಂಧಿಸಿಲ್ಲ. ಯುವತಿ ರಿಶೇಲ್ ಮನೆಯವರು ತಕ್ಷಣ ಪೋಸ್ಟ್‌ಮಾರ್ಟಂ ಮಾಡಿ ಎಂದು ಕೇಳಿರಲಿಲ್ಲ. ತಕ್ಷಣ ಪೋಸ್ಟಮಾರ್ಟಂ ಮಾಡಲು ಯಾರ ಒತ್ತಡವಿತ್ತು ಎಂಬುದು ಬಯಲಾಗಬೇಕು. ಇನ್ನೊಂದು ವಾರದಲ್ಲಿ ರಿಶೇಲ್ ಡಿಸೋಜಾ ಪ್ರಕರಣದ ಬಗ್ಗೆ ನ್ಯಾಯ ಸಿಗದಿದ್ದರೆ, ಇದನ್ನು ಮತ್ತೊಂದು ಹಂತಕ್ಕೆ ಒಯ್ಯುತ್ತೇವೆ ಎಂದು ಅವರು ಎಚ್ಚರಿಸಿದರು.
ರಾಜ್ಯ ಉಪಾಧ್ಯಕ್ಷ ಪ್ರದೀಪ್ ಡಿಮೆಲ್ಲೋ ಮಾತನಾಡಿ, ರಿಶೇಲ್ ಆತ್ಮಹತ್ಯೆ ನಂತರ ತನಿಖೆಯನ್ನು ಸೂಕ್ಷ್ಮವಾಗಿ ಮಾಡಿಲ್ಲ. ಆಕೆಯ ಶವದ ಸುತ್ತ ಇದ್ದ ವಸ್ತುಗಳನ್ನು ಸರಿಯಾಗಿ ತನಿಖೆಗೆ ಸಹಕಾರಿಯಾಗುವಂತೆ ಸಂಗ್ರಹಿಸಿಲ್ಲ. ಈ ಬಗ್ಗೆ ತನಿಖೆಯಾಗಬೇಕು. ಈ ಹಂತದಲ್ಲಿ ಪೋಲೀಸರು ಯಾಕೆ ತನಿಖೆ ಮಾಡಲಿಲ್ಲ. ಈ ಗಾಯಗಳ ಕಾರಣದ ಅನುಮಾನ ಯಾಕೆ ಪೊಲೀಸರಿಗೆ ಬರಲಿಲ್ಲ?. ಪೊಲೀಸರು ಯಾವುದೇ ಅನುಮಾನಸ್ಪದ ಅಂಶಗಳನ್ನು ಪೋಸ್ಟ್ ಮಾರ್ಟಂ ವೇಳೆ ಸೂಚಿಸಿಲ್ಲ, ಉಲ್ಲೇಖಿಸಿಲ್ಲ. ಆತ್ಮಹತ್ಯೆಗೆ ಬಳಸಿದ ವಸ್ತುಗಳನ್ನು ನಮಗೆ ನೀಡಿಲ್ಲ. ಆತ್ಮಹತ್ಯೆಗೆ ಪ್ರಚೋದಿಸಿದ ವ್ಯಕ್ತಿ ಪ್ರಬಲ ರಾಜಕೀಯ ಬಲ, ಪ್ರಭಾವ ಹಾಗೂ ಹಣವಂತನಾಗಿರುವ ಕಾರಣ ಪೊಲೀಸರು ತನಿಖೆಯ ಹಾದಿ ತಪ್ಪಿಸಿದ್ದಾರೆಂದು ಡಿಮೆಲ್ಲೋ ಆರೋಪಿಸಿದರು.























