ಹೊಸ ವರ್ಷ ಆಚರಣೆ ಸೂಚನೆ ಪಾಲಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

0
5

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ 31ರಂದು ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಹೊಸ ವರ್ಷದ ಆಚರಣೆಯನ್ನು ಸಂಯಮಿತ ಹಾಗೂ ಸುರಕ್ಷಿತ ರೀತಿಯಲ್ಲಿ ನಡೆಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶದಂತೆ, ಡಿಸೆಂಬರ್ 31ರಂದು ಸಂಜೆ 6 ಗಂಟೆಯ ನಂತರ ಯಾರೂ ಕೂಡ ಸಮುದ್ರಕ್ಕೆ ಇಳಿಯುವಂತಿಲ್ಲ. ಬೀಚ್‌ಗಳಲ್ಲಿ ಯಾವುದೇ ರೀತಿಯ ಸಮಾರಂಭಗಳು, ಪಾರ್ಟಿ, ಸಂಗೀತ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷಾಚರಣೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಗಿ ಭದ್ರತೆ

ಹೊಸ ವರ್ಷದ ಸಂಭ್ರಮದ ಹೆಸರಿನಲ್ಲಿ ಅಶಾಂತಿ ಉಂಟಾಗದಂತೆ ನೋಡಿಕೊಳ್ಳಲು, ರಾತ್ರಿ 12.30ರ ನಂತರ ಯಾರೂ ಕೂಡ ಬೀಚ್‌ಗಳಲ್ಲಿ ಉಳಿಯಬಾರದು ಹಾಗೂ ತಕ್ಷಣ ತಮ್ಮ ಮನೆಗಳು ಅಥವಾ ವಾಸಸ್ಥಳಗಳಿಗೆ ತೆರಳಬೇಕು ಎಂದು ಸೂಚಿಸಲಾಗಿದೆ. ಜಿಲ್ಲೆಯಾದ್ಯಂತ ಇರುವ ಹೋಟೆಲ್‌, ರೆಸಾರ್ಟ್‌, ಹೋಂಸ್ಟೇ ಹಾಗೂ ಇತರೆ ವಸತಿ ಕೇಂದ್ರಗಳಲ್ಲಿ ಕೂಡ ರಾತ್ರಿ 12.30ರ ನಂತರ ಎಲ್ಲಾ ರೀತಿಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಪ್ರವಾಸೋದ್ಯಮ ಇಲಾಖೆಯ ಸೂಚನೆ: ಡಿಸೆಂಬರ್ 31ರಂದು ಹೊಸ ವರ್ಷದ ಆಚರಣೆಗೆ ದೇಶದ ವಿವಿಧ ರಾಜ್ಯಗಳಿಂದ ಉತ್ತರ ಕನ್ನಡ ಜಿಲ್ಲೆಯ ಕಡಲತೀರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆ, ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: ದಾಂಡೇಲಿ: ಹೊಸ ವರ್ಷಾಚರಣೆಗೆ ಪ್ರವಾಸಿಗರ ಭಾರೀ ದಂಡು – ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರ, ಗೋಕರ್ಣ, ಕುಡ್ಲೆ, ಓಂ, ಹಾಫ್ ಮೂನ್, ಪ್ಯಾರಡೈಸ್, ಕಾಸರಗೋಡ, ಅಪ್ಸರಕೊಂಡ, ಮುರ್ಡೇಶ್ವರ ಕಡಲತೀರಗಳಲ್ಲಿ ಅಗತ್ಯ ಸುರಕ್ಷತಾ ಸಾಧನಗಳೊಂದಿಗೆ ಲೈಫ್ ಗಾರ್ಡ್ ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ.

ಇದೇ ರೀತಿ, ಯಾಣ, ಬನವಾಸಿ, ಶಿರಸಿ, ಸಹಸ್ರಲಿಂಗ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದ್ದು, ಪ್ರವಾಸಿಗರಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಹಾಯ ಒದಗಿಸಲಾಗುತ್ತಿದೆ.

ಆದರೂ ಸಹ, ಪ್ರವಾಸಿಗರು ಹಾಗೂ ಸಾರ್ವಜನಿಕರು ಜಿಲ್ಲಾಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಯಾವುದೇ ಅಪಾಯಕ್ಕೆ ತಾವೇ ಕಾರಣರಾಗದಂತೆ ಎಚ್ಚರಿಕೆ ವಹಿಸಿ, ಶಾಂತಿಯುತ ಮತ್ತು ಸುರಕ್ಷಿತ ಹೊಸ ವರ್ಷದ ಆಚರಣೆಗೆ ಸಹಕರಿಸಬೇಕೆಂದು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.

Previous articleಹರ್ಮಾನ್ ಅರ್ಧಶತಕ: ಟಿ20 ಸರಣಿ ಕ್ಲೀನ್‌ಸ್ವೀಪ್